ಜೇವರ್ಗಿ: ತಾಲೂಕಿನ ಭೀಮಾ ನದಿಯ ದಂಡೆಯ ಮೇಲಿರುವ ಹಳ್ಳಿಗಳಿಗೆ ಪ್ರವಾಹ ಭೀತಿಯಿದ್ದು ತಾಲೂಕಿನ 34 ಹಳ್ಳಿಗಳನ್ನು ಪ್ರವಾಹ ಪೀಡಿತ ಹಳ್ಳಿಗಳೆಂದು ಗುರುತಿಸಲಾಗಿದೆ ಕೂಡಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹಳ್ಳಿಗಳ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಹಾಗೂ ವಿಪಕ್ಷ ಮುಖ್ಯ ಸಚೇತಕ ಡಾ.ಅಜಯಸಿಂಗ ಸೂಚನೆ ನೀಡಿದರು.
ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ನಮ್ಮ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಇದೇ ತಿಂಗಳು 19 ಮತ್ತು 22ರುಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸ್ ಕೆಲಸ ಹಾಗೂ ವಿದ್ಯಾರ್ಥಿಗಳ, ಸಿಬ್ಬಂದಿಗಳಿಗೆ ಮಾಸ್ಕ್‌ಗಳನ್ನು ವಿತರಿಸಿ ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡಲು ಸೂಚಿಸಿದರು.
ಅದೇ ರೀತಿಯಲ್ಲಿ ತಾಲೂಕಿನ ಹಳ್ಳಿಗಳಲ್ಲಿ ವಾದಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ರೈತರಿಗೆ ರಸಗೊಬ್ಬರ ಕ್ರಿಮಿನಾಶಕಗಳ ಮತ್ತು ಬಿತ್ತನೆ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಕ್ರಮವಾಗಿ ರಸಗೊಬ್ಬರಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕಿನಲ್ಲಿ ಇಲ್ಲಿಯವರೆಗೆ 66875 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ ಸಭೆಗೆ ತಿಳಿಸಿದರು.
ಹಾಗೆಯೇ ಎರಡೂ ತಾಲೂಕುಗಳಲ್ಲಿ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ರಸ್ತೆಗಳು ಮತ್ತು ಕಟ್ಟಡ ಕಾಮಗಾರಿಗಳನ್ನು ಗುಣಮಟ್ಟ ಕಾಪಾಡಿಕೊಂಡು ಶೀಘ್ರದಲ್ಲೇ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಗೂ ತಾಲೂಕಿನ ಹಳ್ಳಿಗಳಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳನ್ನು ಮತ್ತು ಕುಡಿಯುವ ನೀರಿನ ಕೆಲಸಗಳನ್ನು ಕೂಡಲೇ ಕೈಗೊಳ್ಳಲು ಹೇಳಿದರು.
ಜೇವರ್ಗಿ ತಹಸೀಲ್ದಾರ್ ವಿನಯಕುಮಾರ ಪಾಟೀಲ, ಯಡ್ರಾಮಿ ತಹಸೀಲ್ದಾರ್ ಶಾಂತಗೌಡ ಬಿರಾದಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ, ತಾಲೂಕು ವೈದ್ಯಾಧಿಕಾರಿ ಸಿದ್ದು ಪಾಟೀಲ, ತಾಲೂಕು ತೋಟಗಾರಿಕೆ ಅಧಿಕಾರಿ ಸುಷ್ಮಾ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.