ಮೈಸೂರು: ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿ ಬೆಂಬಲಿಸಿ ತಪ್ಪು ಮಾಡಿದ್ದೇವೆ ಎಂಬ ಬಗ್ಗೆ ಅರಿವಾಗಿದ್ದು ಮುಂದಿನ ದಿನಗಳಲ್ಲಿ ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮುದಾಯದವರು ಬಿಜೆಪಿ ಪಕ್ಷವನ್ನು ಬೆಂಬಲಿಸಿ ತಪ್ಪು ಮಾಡಿದ್ದಾರೆ. ಇನ್ನು ಮುಂದಾದರೂ ಜಾತ್ಯತೀತ ಪಕ್ಷ ಕಾಂಗ್ರೆಸ್ ಬೆಂಬಲಿಸಲಿ ಎಂದು ತಿಳಿಸಿದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿಯಲ್ಲಿ ನಾಟಕ ಶುರುವಾಗಿದೆ. ಅವರ ವಿರುದ್ಧ 8 ಪ್ರಕರಣ ದಾಖಲಾಗಿದೆ. 2 ವರ್ಷದಲ್ಲಿ ಯಡಿಯೂರಪ್ಪ 30 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ. 2.20 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ 3.27 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. 65 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. 10 ಸಾವಿರ ಕೈಗಾರಿಕೆಗಳು ಮುಚ್ಚಿವೆ. ಇವೆಲ್ಲಾ ರಾಜ್ಯ ಬಿಜೆಪಿಯವರ ಸಾಧನೆಗಳು ಎಂದು ಟೀಕಿಸಿದರು.
ಪಕ್ಷ ಬಿಟ್ಟು ಬಿಜೆಪಿಗೆ ಹೋದ ಯಾರಿಗೂ ಮಂತ್ರಿ ಸ್ಥಾನ ನೀಡುವುದಿಲ್ಲ. 26ರ ನಂತರ ನೀವೆಲ್ಲಾ ನೋಡಿ. ಏಣಿ ಹತ್ತಿದ ಮೇಲೆ ಒದೆಯುವುದು ಬಿಜೆಪಿ ಕೆಲಸ. ಬಳಸಿ ಬಿಸಾಡುವುದು ಬಿಜೆಪಿ ಡಿಎನ್‌ಎನಲ್ಲಿ ಇದೆ. ಮೋದಿ, ಅಮಿತ್ ಶಾ ಗುಜರಾತಿ ಉದ್ಯಮಿಗಳು. ಕಾಂಗ್ರೆಸ್, ಜೆಡಿಎಸ್‌ಗೆ ಡಿಚ್ ಮಾಡಿ ಹೋದವರು ಕಥೆ ಮುಗಿಯಿತು.
ಅವರೆಲ್ಲಾ ಪ್ರೇತ ಬೇತಾಳರಾಗಿ ಅಲೆಯುತ್ತಾರೆ. ಅವರ ಎಲ್ಲಾ ವಿಚಾರ ಸಿಡಿಯಲ್ಲಿವೆ. ಆದರೆ, ಸಿಡಿ ಬಗ್ಗೆ ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಕುಟುಕಿದರು.
ನಳೀನ್ ಕುಮಾರ್ ಕಟೀಲು ಆಡಿಯೋ ವಿಚಾರವಾಗಿ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಸಚಿವ ಆರ್.ಅಶೋಕ್ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿ, ನಿಮ್ಮ ಮನೆಯಲ್ಲಿ ನಡೆಯುವ ವಿಚಾರಕ್ಕೆ ನಾವು ಹೇಗೆ ಹೊಣೆ? ಮದ್ದು ಹಾಕುವವರು ನಿಮ್ಮ ಮನೆಯಲ್ಲೇ ಇದ್ದಾರೆ.
ಅವರ ಬಗ್ಗೆ ನೀವು ಮಾತನಾಡಿ, ಅದು ಬಿಟ್ಟು ಕಾಂಗ್ರೆಸ್ ಬಗ್ಗೆ ಮಾತನಾಡಬೇಡಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಮಧ್ಯೆ ತಂದಿಡುವ ಕೆಲಸ ಮಾಡಬೇಡಿ ಎಂದು ತಿರುಗೇಟು ನೀಡಿದರು.