ಕೊಳ್ಳೇಗಾಲ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ, ಪ್ರವಾಹ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನೇ ಸಿಎಂ ಆಗಿ ಮುಂದುವರಿಸಬೇಕು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನುಭವಿ ರಾಜಕಾರಣಿಯಾಗಿರುವ ಯಡಿಯೂರಪ್ಪ ಅವರನ್ನು ಬದಲಿಸಿ ಅವರ ಜಾಗಕ್ಕೆ ಬೇರೆಯವರನ್ನು ತಂದು ಕೂರಿಸಿದರೇ ಆಡಳಿತದ, ಇಡೀ ರಾಜ್ಯದ ಪರಿಚಯ ಪಡೆದುಕೊಳ್ಳಲು ಆರೇಳು ತಿಂಗಳು ಸಮಯ ಬೇಕಾಗುತ್ತದೆ.
ಉಳಿದಿರುವ ಕೇವಲ ಎರಡು ವರ್ಷದಲ್ಲಿ ಆರೇಳು ತಿಂಗಳು ವ್ಯರ್ಥವಾಗಲಿದೆ. ಅನುಭವಿ ಯಡಿಯೂರಪ್ಪ ಅವರೇ ಮುಂದುವರಿದರೇ ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯಲಿದೆ ಎಂದು ಹೇಳಿದರು.
ಪ್ರತಿಭಟನೆ ಹಿಂಪಡೆದ ಅಭಿಮಾನಿಗಳು: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲು ನಡೆದಿರುವ ಬೆಳವಣಿಗೆಯನ್ನು ಖಂಡಿಸಿ ಹಾಗೂ ಅವರನ್ನೇ ಎರಡೂ ವರ್ಷ ಮುಂದುವರಿಸಬೇಕು ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಶುಕ್ರವಾರ (ಜುಲೈ23) ನಡೆಸಲು ಉದ್ದೇಶಿಸಿದ್ದ ಬೃಹತ್ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ಬಿಎಸ್ ವೈ ಅಭಿಮಾನಿಗಳು, ವೀರಶೈವ-ಲಿಂಗಾಯತ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪ್ರತಿಭಟನೆ ಕೈಬಿಡಲಾಗಿದೆ ಎಂದು ಸಮಾಜದ ಮುಖಂಡರೊಬ್ಬರು ತಿಳಿಸಿದರು.