ಬೆಂಗಳೂರು: ಮಹದೇವಪುರ ವಲಯದಲ್ಲಿ ಅನಧಿಕೃತ ಕೇಬಲ್ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇಂದು ಮಾಡಲಾಯಿತು.
ಉಚ್ಚ ನ್ಯಾಯಲಯದ ಆದೇಶ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ ಶನಿವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ವಲಯದಲ್ಲಿ ವಾರ್ಡ್ನ ಅಭಿಯಂತರರು ಹಾಗೂ ಉಪ-ವಿಭಾಗದ ಅಭಿಯಂತರರ ನೇತೃತ್ವದಲ್ಲಿ 14.06 ಕಿ.ಮೀ ಉದ್ದದ ರಸ್ತೆ ಬದಿಯ ಅನದಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಹೂಡಿ, ಮಾರತ್‌ಹಳ್ಳಿ, ಮಹದೇವಪುರ ಹಾಗೂ ಎಚ್.ಎ.ಎಲ್ ಉಪ-ವಿಭಾಗಗಳ ವ್ಯಾಪ್ತಿಯ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಮರಗಳ ಮೇಲೆ ಹಾಗೂ ಕಂಬಗಳ ಮೇಲೆ ನೇತಾಡುತ್ತಿರುವ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.
ಅನಧಿಕೃತವಾಗಿ ಅಳವಡಿಸುವ ಕೇಬಲ್ ಗಳಿಂದ ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುವ ಪಾದಚಾರಿಗಳಿಗೆ ಸಮಸ್ಯೆಯಾಗಲಿದೆ ಜೊತೆಗೆ ಮಾರಕವಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಹಿತದೃಷ್ಟಿ ಹಾಗೂ ಸುರಕ್ಷತಾ ದೃಷ್ಟಿಯಿಂದ ಪಾದಚಾರಿ ಮಾರ್ಗಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಂತಹ ಒಟ್ಟು 15 ತಾತ್ಕಾಲಿಕ ಮತ್ತು ಶಾಶ್ವತ ಒತ್ತುವರಿಗಳನ್ನು ತೆರವುಗೊಳಿಸಿದ್ದು, ಇನ್ನುಮುಂದೆ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ಮಾಡಬಾರದೆಂದು ವ್ಯಾಪಾರಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಅನಧಿಕೃತವಾಗಿ ಕೇಬಲ್‌ಗಳನ್ನು ಅಳವಡಿಸಿದರೆ ಅಂತಹ ಕೇಬಲ್‌ಗಳನ್ನು ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಹಾಗೂ ಇದೇ ರೀತಿ ಇನ್ನಿತರ ಕಡೆಯ ಉಪ-ವಿಭಾಗಗಳಲ್ಲಿ ಅನಧಿಕೃತ ಕೇಬಲ್ ತೆರವು ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದುಮಹದೇವಪುರ ವಲಯದ ಮುಖ್ಯ ಇಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ತಿಳಿಸಿದರು.