ಬೆಂಗಳೂರು: ನನ್ನ ಕೆಲಸವನ್ನು ಆರಂಭಿಸಿದ್ದೇನೆ. ನನಗೆ ಯಾವ ಖಾತೆ ಕೊಡುತ್ತೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕೇಳಿದ್ದೆ. ಕೃಷಿಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿಲ್ಲ ಅಂದಿದ್ದರು. ಸಂತೋಷದಿಂದ ನಾನು ಕೃಷಿ ಖಾತೆ ವಹಿಸಿಕೊಂಡಿದ್ದೇನೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಂದು ಕಚೇರಿಗೆ ಪೂಜೆ ಮಾಡಿ, ಅಧಿಕೃತವಾಗಿ ಕೆಲಸ ಆರಂಭಿಸಿ ಮಾತನಾಡಿದ ಅವರು, ನಾವು ಯಾವ ಖಾತೆಯಲ್ಲಿದ್ದರೂ ಅದು ಸರ್ಕಾರದ ಕೆಲಸ. ಆನಂದ್ ಸಿಂಗ್ಗೆ ಮೊದಲು ದೊಡ್ಡ ಖಾತೆಯನ್ನು ಕೊಟ್ಟಿದ್ದರು. ಆ ಖಾತೆಯನ್ನು ಕಿತ್ತುಕೊಂಡಿದ್ದಕ್ಕೆ ಅಸಮಾಧಾನವಾಗಿದೆ. ಖಾತೆ ದೊಡ್ಡದು ಅಂದರೆ ಹೆಚ್ಚು ಕೆಲಸ ಇರುತ್ತದೆ ಎಂದು ತಿಳಿಸಿದರು.
ಇನ್ನು ಅರಣ್ಯ ಖಾತೆ ಬಗ್ಗೆ ಏನು ಕನಸು ಕಂಡಿದ್ದರೆಂದು ಗೊತ್ತಿಲ್ಲ. 105+17 ಎರಡೂ ಸೇರಿದ್ದಕ್ಕೆ ಸರ್ಕಾರ ಸುಸೂತ್ರವಾಗಿದೆ. ಎರಡಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿ, ಖಾತೆ ಹಂಚಿಕೆ ವೇಳೆ ಅಸಮಾಧಾನ ಸಹಜ. ಸಿಎಂ ಬೊಮ್ಮಾಯಿ ಅಸಮಾಧಾನವನ್ನು ಸರಿಪಡಿಸುತ್ತಾರೆ. ಎಲ್ಲದಕ್ಕೂ ಸದ್ಯದಲ್ಲಿಯೇ ತೆರೆಬೀಳುತ್ತದೆ ಎಂಬ ವಿಶ್ವಾಸದ ನುಡಿಗಳನ್ನಾಡಿದರು.
ನಮ್ಮ ಮಿತ್ರಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಸಚಿವ ಆನಂದ್ ಸಿಂಗ್ ಜತೆ ನಾನು ಚರ್ಚೆ ಮಾಡಿದ್ದೇನೆ. ಸದ್ಯದಲ್ಲಿಯೇ ಎಲ್ಲಾ ಅಸಮಾಧಾನ ಬಗೆಹರಿಯುತ್ತದೆ ಎಂದರು.
ಬಳಿಕ ಸಚಿವರು ವಿಜಯೋತ್ಸವ ಮಾಡುತ್ತಿದ್ದಾರೆಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ್, ನಾವು ಯಾವುದೇ ವಿಜಯೋತ್ಸವವನ್ನು ಮಾಡಿಲ್ಲ. ನಾವು ಸಚಿವರಾಗಿದ್ದಕ್ಕೆ ಸಹಜವಾಗಿ ಜನ ಖುಷಿ ಪಟ್ಟಿದ್ದಾರೆ. ಸಂಭ್ರಮಾಚರಣೆ ಖುಷಿಯಿಂದ ಆಗಿದೆ ಏನೂ ಮಾಡುವುದಕ್ಕೆ ಆಗಲ್ಲ ಎಂದರು.
ಜನರು ಖುಷಿಯಿಂದ ಬಂದಾಗ ಹೊಡೆದು ಓಡಿಸಲು ಆಗಲ್ಲ. ಜನರಿಂದ ಆಯ್ಕೆಯಾದವರು, ಅವರ ಪ್ರೀತಿ ತಡೆಯಬಾರದು. ವಿಪಕ್ಷದಲ್ಲಿ ಇದ್ದವರು ಟೀಕೆ ಮಾಡುವುದು ಸಹಜ ಎಂದು ಹೇಳಿದರು.