ಕೊಡಗು: ಶಾಸಕ ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ಕೊಡಲು ಆಗ್ರಹಿಸಿ ಅವರ ನೂರಾರು ಬೆಂಬಲಿಗರು ‘ಬೆಂಗಳೂರು ಚಲೋ’ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಸುಂಟಿಕೊಪ್ಪದಿಂದ ಆರಂಭವಾದ ಈ ರ‍್ಯಾಲಿ ಸೋಮವಾರ ಪೇಟೆ, ಕುಶಾಲನಗರ ಮತ್ತಿತರ ಕಡೆಗಳಿಂದ ಟೆಂಪೋ ಟ್ರಾವಲರ್ಸ್ ಸೇರಿದಂತೆ ಸುಮಾರು 130 ವಾಹನಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿತು.
ಪ್ರತಿಭಟನಾಕಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಬೇಕೆಂದು ಒತ್ತಾಯಿಸಿದಾಗ ಪೊಲೀಸರು ಬ್ಯಾರಿಕೇಡ್ ಮೂಲಕ ಅವರನ್ನು ತಡೆದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಕೆಲ ಪ್ರತಿಭಟನಾಕಾರರನ್ನು ಮುಖ್ಯಮಂತ್ರಿ ಜತೆಗೆ ಮಾತನಾಡಲು ಅವಕಾಶ ಮಾಡಿಕೊಡಲಾಯಿತು.
ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಅಪ್ಪಚ್ಚು ರಂಜನ್ ಬೆಂಬಲಿಗರು, ಸಂಪುಟದಲ್ಲಿ ತಮ್ಮ ನೆಚ್ಚಿನ ಶಾಸಕರಿಗೆ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಐದು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ನೀಡದಂತೆ ವಂಚಿಸಲಾಗಿದೆ. ಬೇರೆ ಜಿಲ್ಲೆಯಿಂದ ಬಂದವರಿಗೆ ಉಸ್ತುವಾರಿ ನೀಡುವುದರಿಂದ ಏನು ಪ್ರಯೋಜನವಾಗಲಿದೆ ಎಂದು ಪ್ರಶ್ನಿಸಿದ್ದರು.
ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗಾಗಿ ಕಳೆದ 30 ವರ್ಷಗಳಿಂದ ಅಪ್ಪಚ್ಚು ರಂಜನ್ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ವಿರುದ್ಧ ಹೋರಾಡಿ ಪ್ರಯತ್ನದ ಫಲವಾಗಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಪಾಠ ಇಲ್ಲದಂತಾಗಿದೆ. ರಂಜನ್‌ಗೆ ಸಚಿವ ಸ್ಥಾನ ನಿರಾಕರಿಸಲಾಗಿದ್ದರೂ, ಟಿಪ್ಪು ಜಯಂತಿಗೆ ಆಶ್ವಾಸನೆ ನೀಡಿದ ಸಚಿವ ಆನಂದ್ ಸಿಂಗ್‌ಗೆ ಸಂಪುಟ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.