ನ್ಯೂಡೆಲ್ಲಿ: ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಆಯಾ ರಾಜ್ಯದ ಹೈಕೋರ್ಟ್ ಅನುಮತಿ ಇಲ್ಲದೆ ಹಿಂಪಡೆಯುವಂತಿಲ್ಲ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಚಾರಣೆ ಮಾಡುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಆ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಬೇರೆಡೆ ವರ್ಗಾಯಿಸುವಂತಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾ.ಸೂರ್ಯಕಾಂತ್ ಹಾಗೂ ನ್ಯಾ.ವಿನೀತ್ ಸರನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ಮೂಲಕ ತೀರ್ಪಿನ ಮೇಲೆ ಪ್ರಭಾವ ಬೀರಿರುವ ಹಲವಾರು ನಿದರ್ಶನಗಳಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ಬಾಕಿ ಉಳಿದಿರುವ ಸಂಸದರು ಹಾಗೂ ಶಾಸಕರ ವಿರುದ್ಧದ ಕೇಸ್ಗಳ ಮಾಹಿತಿಯನ್ನು ನೀಡುವಂತೆ ಹೈಕೋರ್ಟ್ಗಳ ರಿಜಿಸ್ಟ್ರಾರ್ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕೇರಳ ಸರ್ಕಾರ ವರ್ಸಸ್ ಕೆ.ಅಜಿತ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ 2020ರ ಸೆಪ್ಟೆಂಬರ್ 16ರಿಂದ ಸಂಸದರು ಹಾಗೂ ಶಾಸಕರ ವಿರುದ್ಧದ ಕೇಸ್ಗಳನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ಗಳು ಮನವಿ ಮಾಡಿದ್ದವು. ಅದರಂತೆ ಈಗ ಆದೇಶ ಹೊರಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.