ಬಳ್ಳಾರಿ: ತಾವು ಕೇಳಿದ ಖಾತೆ ಸಿಕ್ಕಿಲ್ಲವೆಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮುನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಇದನ್ನ ಅವರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಆದರೆ, ಆನಂದ್ ಸಿಂಗ್ ಅವರು ಸಚಿವ ಸ್ಥಾನವಷ್ಟೇ ಅಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂಬಂತಹ ಸುದ್ದಿ ಈಗ ಕೇಳಿಬರುತ್ತಿದೆ.
ಕಳೆದ ಮೂರು ದಿನಗಳಿಂದ ಅವರ ನಡೆವಳಿಕೆ ಗಮನಿಸಿದರೆ ಅವರು ಈಗಾಗಲೇ ರಾಜೀನಾಮೆ ಕೊಟ್ಟಂತಿದೆ. ಒಂದು ಮೂಲದ ಪ್ರಕಾರ ಭಾನುವಾರವೇ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮುಚ್ಚಿದ ಲಕೋಟೆಯಲ್ಲಿ ರಾಜೀನಾಮೆ ಕೊಟ್ಟು ಬಂದರು ಎನ್ನಲಾಗುತ್ತಿದೆ. ಇದಕ್ಕೆ ಇಂಬು ಕೊಡುವಂತೆ ಹೊಸಪೇಟೆಯಲ್ಲಿರುವ ತಮ್ಮ ಹಳೆ ನಿವಾಸದ ಕಾರ್ಯಾಲಯವನ್ನು ಆನಂದ್ ಸಿಂಗ್ ತೆರವುಗೊಳಿಸಿದ್ದಾರೆ.
ತಾನೇನು ಭ್ರಷ್ಟನಲ್ಲ, ಯಾವ ಹಗರಣವೂ ಮೆತ್ತಿಕೊಂಡಿಲ್ಲ. ಆದರೂ ನನಗೆ ಯಾಕೆ ಆ ಖಾತೆ ಕೊಡಲಿಲ್ಲ ಎಂದು ಪ್ರಶ್ನಿಸಿರುವ ಅವರು, ತಾನು ಅರ್ಹನಲ್ಲ ಎಂದು ನೇರವಾಗಿ ಹೇಳಿಬಿಟ್ಟರೆ ಸರಿ. ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು. ಹಾಗೆಯೇ, ತಾನೊಬ್ಬ ಹಠವಾದಿ. ಮೂರು ದಿನ ಕಾದು ನೋಡಿ ಎಂದು ವಾರದ ಹಿಂದೆಯೇ ಅವರು ತಮ್ಮ ಬೆಂಬಲಿಗರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಸಂಪುಟದಲ್ಲಿ ನೀಡಲಾಗಿದ್ದ ಖಾತೆಗಳನ್ನೇ ಈ ಬಾರಿಯೂ ಆನಂದ್ ಸಿಂಗ್ ಅವರಿಗೆ ನೀಡಲಾಗಿದೆ. ಆದರೆ, ಅವರು ಪ್ರಬಲ ಎನಿಸುವ ಇಂಧನ ಅಥವಾ ಕೈಗಾರಿಕೆ ಖಾತೆಗೆ ಬೇಡಿಕೆ ಇಟ್ಟಿದ್ದರು. ಅದು ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದಾರೆ.
ನಾನೇನು ಪಕ್ಷಕ್ಕೆ ಕೆಲಸ ಮಾಡಿಲ್ಲವಾ? ಸರ್ಕಾರ ಬರಲು ಶ್ರಮಿಸಿಲ್ಲವಾ, ಯಡಿಯೂರಪ್ಪ ಸರ್ಕಾರದಲ್ಲಿ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡುವ ಪ್ರಮುಖ ಬೇಡಿಕೆ ಇಟ್ಟಿದ್ದೆ. ಅದು ಈಡೇರಿದ್ದರಿಂದ ತಾನು ಪಕ್ಷ ನೀಡಿದ ಖಾತೆಯನ್ನ ಒಪ್ಪಿಕೊಂಡು ಕೆಲಸ ಮಾಡಿದ್ದೆ. ಈಗಲೂ ತಾನು ಕೇಳಿದ ಖಾತೆ ಯಾಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಆನಂದ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಹೊಸಪೇಟೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಕುಟುಂಬ ಸಮೇತರರಾಗಿ ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಅನಂದ್ ಸಿಂಗ್ ಪ್ರಮುಖ ನಿರ್ಧಾರ ಪ್ರಕಟಿಸುವ ಮುನ್ನ ಈ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಘೋಷಿಸುವ ಮುನ್ನವೂ ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.
ಆನಂದ್ ಸಿಂಗ್ ಅವರು ಹೊಸಪೇಟೆಯ ರಾಣಿಪೇಟೆಯಲ್ಲಿರುವ ತಮ್ಮ ನಿವಾಸದಲ್ಲೇ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯಾಲಯ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಿರುವ ಬೆಳವಣಿಗೆ ಒಂದೆಡೆ ನಡೆಯುತ್ತಿದೆ. ಆನಂದ್ ಸಿಂಗ್ ಅವರ ಈ ನಡೆ ಸಿಎಂ ಬೊಮ್ಮಾಯಿ ಅವರಿಗೆ ದೊಡ್ಡ ತಲೆನೋವಾಗಿದೆ.
ಇಂದು ಅವರು ದೂರವಾಣಿ ಮೂಲಕ ಆನಂದ್ ಸಿಂಗ್ ಅವರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುವ ನಿರೀಕ್ಷೆ ಇದೆ. ಎಂ.ಟಿ.ಬಿ. ನಾಗರಾಜ್ ಅವರೂ ಈಗಾಗಲೇ ರಾಜೀನಾಮೆ ಬೆದರಿಕೆ ಹಾಕಿದ್ಧಾರೆ. ತಾವು ಕೇಳಿದ ಖಾತೆ ಕೊಡಲಿಲ್ಲ ಎಂಬುದೂ ಎಂಟಿಬಿ ಅವರ ಅಸಮಾಧಾನಕ್ಕೆ ಕಾರಣ. ಇನ್ನೊಂದೆಡೆ ಬಿ.ಶ್ರೀರಾಮುಲು ಅವರು ಕೂಡ ಸಾರಿಗೆ ಖಾತೆ ಬೇಡ ಸಮಾಜ ಕಲ್ಯಾಣ ಇಲಾಖೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.