ಬೆಂಗಳೂರು: ಸ್ಮಾರ್ಟ್ ಸಿಟಿ ವತಿಯಿಂದ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ರಸ್ತೆಯ ಬಗ್ಗೆ ಸಾಕಷ್ಟು ದೂರುಗಳು ಬಂದ ಪರಿಣಾಮ ಇಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಂದಾಯ ಸಚಿವ ಆರ್. ಅಶೊಕ್ ಈ ರಸ್ತೆಯನ್ನು ಇತರ ರಸ್ತೆಗಳಿಗೆ ಮಾದರಿಯಾಗುವಂತೆ ಅಭಿವೃದ್ಧಿ ಪಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಪಾಸಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗೆ ಅಳವಡಿಸಿರುವ ಟೈಲ್ಸ್ ಗಳ ಬಣ್ಣ ಹಾಳಾಗಿರುವುದರಿಂದ ಕೂಡಲೆ ಅದನ್ನು ತೆರವುಗೊಳಿಸಿ ಗುತ್ತಿಗೆದಾರರ ಹಣದಿಂದಲೇ ಸೆಪ್ಟೆಂಬರ್ ವೇಳೆಗೆ ಹೊಸದಾಗಿ ಟೈಲ್ಸ್ ಅಳವಡಿ ಮಾದರಿ ರಸ್ತೆಯನ್ನಾಗಿ ನಿರ್ಮಿಸಲು ಎಂದು ಆಗ್ರಹಿಸಿದರು.
ಕಮರ್ಷಿಯಲ್ ಸ್ಟ್ರೀಟ್ ರಸ್ತೆಯು 450 ಮೀಟರ್ ಉದ್ದವಿದ್ದು, ಸ್ಮಾರ್ಟ್ ಸಿಟಿ ರಸ್ತೆ ವತಿಯಿಂದ 5.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗತ್ತಿಕೊಳ್ಳಲಾಗಿದೆ. ರಸ್ತೆಗೆ ಅಳವಡಿಸಿರುವ ಟೈಲ್ಸ್ ಗಳ ಬಣ್ಣ ಹಾಳಾಗಿದ್ದು, ಅವುಗಳನ್ನು ಪೂರ್ತಿಯಾಗಿ ತೆಗೆದು ಗುಣಮಟ್ಟವಿರುವ ಟೈಲ್ಸ್ ಗಳನ್ನು ಅಳವಡಿಸಲು ತಿಳಿಸಲಾಗಿದೆ. ಅಲ್ಲದೆ ಕಮರ್ಷಿಯಲ್ ಸ್ಟ್ರೀಟ್ ಗೆ ಹೊಂದಿಕೆಯಾಗುವ ಕ್ರಾಸ್ ರಸ್ತೆಗಳನ್ನು ಕೂಡಾ ಹೊಸದಾಗಿ ಸೇರ್ಪಡೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಕಮರ್ಷಿಯಲ್ ಸ್ಟ್ರೀಟ್ ರಸ್ತೆಗೆ ಯಾವುದೇ ಹೆಚ್ಚುವರಿ ಹಣ ವ್ಯಯಿಸುವುದಿಲ್ಲ. ಕಳಪೆ ಟೈಲ್ಸ್ ಅಳವಡಿಸಿರುವುದರಿಂದ ಗುತ್ತಿಗೆದಾರರೇ ಸದ್ಯ ಅಳವಡಿಸಿರುವ ಟೈಲ್ಸ್ ಅನ್ನು ತೆರವುಗೊಳಿಸಿ ಗುಣಮಟ್ಟದ ಟೈಲ್ಸ್ ಅನ್ನು ಅಳವಡಿಸಲಿದ್ದು, ರಸ್ತೆಯನ್ನು ಮೂರು ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದರು.
ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗಗಳಲ್ಲಿ ಯುಟಿಲಿಟಿ, ಓಎಫ್ಸಿ ಡಕ್ಟ್ ಗಳನ್ನು ಅಳವಡಿಸಲಾಗಿದೆ. ಅಂಗಡಿಗಳಿಗೆ ಮಳೆ ನೀರು ನುಗ್ಗದ ಹಾಗೆ ಮಳೆ ಬಿದ್ದ ನೀರು ಸರಾಗವಾಗಿ ಕಾಲುವೆಗೆ ಹರಿಯುವ ವ್ಯವಸ್ಥೆ ಮಾಡಲಾಗಿದೆ. ಇರುವ ರಸ್ತೆಯನ್ನು ತ್ವರಿತಗತಿಯಲ್ಲಿ ದುರಸ್ತಿಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗುರುದ್ವಾರ ಮುಂಭಾಗ ರಾಜಕಾಲುವೆ ಪರಿಶೀಲನೆ
ಹಲಸೂರು ಕೆರೆ ಬಳಿಯ ಗುರುದ್ವಾರ ಜಂಕ್ಷನ್ ಮುಂಭಾಗದ ರಾಜಕಾಲುವೆಯನ್ನು ಪರಿಶೀಲನೆ ಮಾಡಿ, ಮಳೆಗಾಲದ ವೇಳೆ ನೀರು ಸರಾಗವಾಗಿ ಹರಿದು ಹೋಗಬೇಕು. ಈ ಭಾಗದಲ್ಲಿ ಯಾವುದೇ ಸಮಸ್ಯೆ ಆಗಬಾರದು. ಕಾಲ ಕಾಲಕ್ಕೆ ಕಾಲುವೆಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುತ್ತಿರಬೇಕು ಎಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಶಾಸಕ ರಿಜ್ವಾನ ಹರ್ಷದ್, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ, ಪೂರ್ವ ವಲಯ ಆಯುಕ್ತ ಮನೋಜ್ ಜೈನ್, ಆಯುಕ್ತ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ವಲಯ ಮುಖ್ಯ ಇಂಜಿನಿಯರ್ ಪ್ರಭಾಕರ್, ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಹಾಗೂ ಇತರ ಅಧಿಕಾರಿಗಳು ಇದ್ದರು.