ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಈ ಕೂಡಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳ್ಳಬೇಕು ಎಂದು ಶನಿವಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ನಿಗಮದ ವಿಜಯಪುರ ವಿಭಾಗದ ಡಿಸಿ ನಾರಾಯಣಪ್ಪ ಕುರಬರ ಲಂಚವಿಲ್ಲದೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಅವರು ನೌಕರರಿಂದ ಲಂಚ ಪಡೆದಿದ್ದಾರೆ ಎಂಬ ಆಡಿಯೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು, ಈ ಸಂಬಂಧ ವಿಜಯಪಥ ವೆಬ್ ನ್ಯೂಸ್ ಕೂಡ ಶನಿವಾರ ವರದಿ ಮಾಡಿತ್ತು.
ವಿಜಯಪಥದಲ್ಲಿ ವರದಿ ಬರುತ್ತಿದ್ದಂತೆ ನಾರಾಯಣಪ್ಪ ಕುರುಬರ ಅವರನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ನಿಗಮದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸೂಕ್ತ ಅಧಿಕಾರಿಗಳ ಆದೇಶದ ಮೇರೆಗೆ ಹುದ್ದೆ ನಿರೀಕ್ಷಣೆಯಲ್ಲಿರಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ನಾರಾಯಣಪ್ಪ ಅವರು ಶನಿವಾರ ಮಧ್ಯಾಹ್ನವೇ ವಿಭಾಗಿಯ ಸಂಚಾರ ಅಧಿಕಾರಿಗಳಿಗೆ ತಮ್ಮ ಕಾರ್ಯಭಾರವನ್ನು ವಹಿಸಿ ಬಿಡುಗಡೆಗೊಳ್ಳಲು ಹಾಗೂ ಮುಂದಿನ ಆದೇಶಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಮುಂದೆ ಹಾಜರಾಗಲು ಆದೇಶಿಸಲಾಗಿದೆ.
ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಡಿಸಿ ನಾರಾಯಣಪ್ಪ ಕುರಬರ ಲಂಚಾವತಾರ : ಸಾಮಾಜಿಕ ಜಾಲತಾಣದಲ್ಲಿ ಭಾರಿ ಸೌಂಡ್