ಮೈಸೂರು: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಯೋಜನೆಗಳು ಅಂದಿನ ಯುಪಿಎ ಸರ್ಕಾರದ ಕೊಡುಗೆ ಎಂದು ವಿಧಾನ ಪರಿಷತ್ ಬಿಜೆಪಿ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.
ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ದಶಪಥ ಯೋಜನೆ ತಂದದ್ದು ನಾನು ಎಂದು ಹೇಳುತ್ತಿರುವ ಸಂಸದ ಪ್ರತಾಪಸಿಂಹ ಹೇಳಿಕೆಗೆ ಎಚ್.ವಿಶ್ವನಾಥ್ ಈ ಮೂಲಕ ತಿರುಗೇಟು ನೀಡಿದರು.
ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಗಳು ಅಂದಿನ ಯುಪಿಎ ಸರ್ಕಾರದ ಕೊಡುಗೆಗಳಾಗಿವೆ. ಆಗ ಕೇಂದ್ರದಲ್ಲಿ ಯುಪಿಎ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿತ್ತು. ಆಗ ಅನುಮೋದನೆ ಆಗಿರುವ ಯೋಜನೆಗಳ ಶ್ರೇಯಸ್ಸು ಅಂದಿನ ಸರ್ಕಾರಗಳಿಗೆ ಸಲ್ಲಬೇಕು ಎಂದು ತಿಳಿಸಿದರು.
ಇನ್ನು ಇದು ಪ್ರತಾಪ್ ಸಿಂಹ ಕೆಲಸವಲ್ಲ, ಯುಪಿಎ ಸರ್ಕಾರದ ಸಾಧನೆ. 10-12 ವರ್ಷಗಳ ಹಿಂದೆ ಆಗಿರುವ ಯೋಜನೆಗಳನ್ನು ನಾನು ಮಾಡಿಸಿದ್ದೇನೆ ಎಂದು ಸುಳ್ಳು ಹೇಳಬಾರದು ಎಂದು ಪ್ರತಾಪಸಿಂಹಗೆ ಸಲಹೆ ರೀತಿಯಲ್ಲೇ ತಿರುಗೇಟು ನೀಡಿದರು.
ಪ್ರತಾಪಸಿಂಹ ಹೊಸದಾಗಿ ಏನನ್ನಾದರೂ ಮಾಡಲಿ. ಸುಮ್ಮನೆ ಅನಾವಶ್ಯಕವಾಗಿ ಇದನ್ನು ನಾನು ಮಾಡಿದೆ ಎಂದು ಹೇಳಬಾರದು. ನೀವು ಎಂಪಿ ಆದ ನಂತರ ಈ ಯೋಜನೆ ಬಂದಿಲ್ಲ. ನಾನು ಹಾಗೂ ಆಗ ಎಂಪಿಗಳಾಗಿದ್ದ ಧ್ರುವನಾರಾಯಣ್, ರಮ್ಯ ಇದ್ದಾಗ ಬಂದ ಯೋಜನೆ. ಉಂಡುವಾಡಿ ಯೋಜನೆಯನ್ನು ಸಹ ನೀವು ತಂದಿದ್ದಲ್ಲ, ಈ ರೀತಿ ಏಕೆ ಸುಳ್ಳು ಹೇಳುತ್ತಿದ್ದೀರಿ ಎಂದು ಟೀಕಿಸಿದರು.
ಶಾಲಾ-ಕಾಲೇಜುಗಳ ಆರಂಭ ಸ್ವಾಗತಾರ್ಹ
ನಾಳೆಯಿಂದ (ಆ.23) ಶಾಲಾ-ಕಾಲೇಜುಗಳು ಆರಂಭವಾಗುತ್ತಿರುವುದು ಸ್ವಾಗತಾರ್ಹ. ಆದರೆ, ಮುನ್ನೆಚ್ಚರಿಕೆ ಕ್ರಮ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಗ್ರಾಮ ಪಂಚಾಯಿತಿ, ನಗರಪಾಲಿಕೆ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲು ಒತ್ತಾಯ
ಮೈಸೂರು ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಕುರಿತು, ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ವೀಕೆಂಡ್ ಕರ್ಫ್ಯೂ ಜಾರಿಯಿಂದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ರಾಜ್ಯದ ಗಡಿ ಭಾಗಗಳಲ್ಲಿ ಬಿಗಿ ಕ್ರಮಕೈಗೊಳ್ಳಬೇಕು. ಗಡಿಗಳನ್ನು ಬಂದ್ ಮಾಡಬೇಕು. ಹೀಗಾಗಿ, ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.