ಮೈಸೂರು: ಕೊರೊನಾ ಮುಂಜಾಗ್ರತೆ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಎಲ್ಲೆಡೆ ಇಂದಿನಿಂದ 9ರಿಂದ ದ್ವಿತೀಯ ಪಿಯುಸಿವರೆಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ.
ಇನ್ನು ಇಂದು ಶಾಲೆಗಳು ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾವರಣದಲ್ಲಿ ರಂಗೋಲಿ ಬಿಡಿಸಿ, ಹೂ, ಮಾವು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ನಗರದ ಹಲವು ಶಾಲೆಗಳು ಅಲಂಕಾರದಿಂದ ಕಂಗೊಳಿಸುತ್ತಿದ್ದು, ಗೋ ಕೊರೊನಾ ಎಂದು ಸಾರುವಂತಿವೆ. ವಿದ್ಯಾರ್ಥಿಗಳು ಸಹ ಖುಷಿಯಿಂದ ಮೊದಲ ದಿನ ಶಾಲೆಗಳಿಗೆ ಆಗಮಿಸಿ ಸಂಭ್ರಮಿಸುತ್ತಿದ್ದಾರೆ.
ಇನ್ನು ಮೈಸೂರಿನ ಸಂತ ಮೇರಿಸ್ ಪ್ರೌಢ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶಾಲೆಯನ್ನು ಹೂವು, ಮಾವಿನ ತೋರಣ ಹಾಗೂ ಬಲೂನುಗಳಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಶಾಲೆ ಶುರುವಾಗುತ್ತಿರುವ ಸಂತಸ ಹಂಚಿಕೊಳ್ಳಲಾಗುತ್ತಿದೆ.
ಬಹಳ ಮುಖ್ಯವಾಗಿ ಸ್ಯಾನಿಟೈಸೇಷನ್, ಸಾರ್ವಜನಿಕ ಅಂತರ ಮೊದಲಾದ ಕೋವಿಡ್ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ.
ಕೃಷ್ಣರಾಜ ಯುವ ಬಳಗ ಹಾಗೂ ಅಪೂರ್ವ ಸ್ನೇಹ ಬಳಗ ವತಿಯಿಂದ ವಿದ್ಯಾರಣ್ಯಪುರಂನ ಟಿ ಎಸ್ ಸುಬ್ಬಣ್ಣನವರ ಸಾರ್ವಜನಿಕ ಶಾಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರತಿ ಬೆಳಗಿ, ಗುಲಾಬಿ ಹೂವು, ಪುಸ್ತಕ, ಪೆನ್ ಹಾಗೂ ಮಾಸ್ಕ್ ವಿತರಿಸಿ ಸ್ವಾಗತ ಕೋರಲಾಯಿತು.
ಮೈಸೂರು ಜಿಲ್ಲೆಯಲ್ಲಿ 766 ಶಾಲೆಗಳು, 257 ಕಾಲೇಜುಗಳು ತೆರೆದಿದ್ದು, ಅವುಗಳಲ್ಲಿ 232 ಸರ್ಕಾರಿ ಶಾಲೆಗಳು, 45 ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳು, 134 ಅನುದಾನಿತ ಖಾಸಗಿ ಶಾಲೆಗಳಾದರೆ, 349 ಅನುದಾನ ರಹಿತ ಖಾಸಗಿ ಶಾಲೆಗಳು, ಕೇಂದ್ರ ವಿದ್ಯಾಲಯಗಳು 6 ಸೇರಿವೆ.
ಅಂತೆಯೇ, 3 ವಸತಿ ಕಾಲೇಜು, 74 ಕಾಲೇಜು ಸೇರಿ ಒಟ್ಟು 77 ಸರ್ಕಾರಿ ಕಾಲೇಜುಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೇಕೆ ತಡ ಹೊಡಿರಿ ಘಂಟೆ.