ಬೆಂಗಳೂರು: ಮುಷ್ಕರ ಸಂದರ್ಭದಲ್ಲಿ ವಜಾ, ವರ್ಗಾವಣೆ, ಅಮಾನತು ಗೊಂಡಿರುವವರನ್ನು ಅವರ ಮೂಲ ಸ್ಥಾನದಲ್ಲೇ ಕರ್ತವ್ಯಕ್ಕೆ ಮತ್ತೆ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಈ ಮೂಲಕ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ನೌಕರರಿಗೆ ನಾಳೆ (ಸೆ.16) ಸಂಜೆಯೊಳಗೆ ಸಿಹಿ ಸುದ್ದಿ ನೀಡುವುದು ಬಹುತೇಕ ಖಚಿತವಾಗಿದೆ.
ಸೆ.14ರಂದು ಕೆಎಸ್‌ಆರ್‌ಟಿಸಿ ದೂರದೂರಿಗಳಿಗೆ ವರ್ಗಾವಣೆ ಮಾಡಿದ್ದವರನ್ನು ಮತ್ತೆ ಅವರ ಮಾತೃ ವಿಭಾಗಕ್ಕೆ ಕೋರಿಕೆ ಮೇರೆಗೆ ಎಂದು ಮರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಇದರಿಂದ ನೌಕರರು ಸೇವಾ ಹಿರಿತನವನ್ನು ಕಳೆದುಕೊಳ್ಳಲಿದ್ದಾರೆ.
ಹೀಗಾಗಿ ಈ ಬಗ್ಗೆ ಸಚಿವರನ್ನು ಬುಧವಾರ ಸಂಜೆ ಭೇಟಿ ಮಾಡಿದ ನೌಕರರ ಕೂಟದ ಪದಾಧಿಕಾರಿಗಳು ಈ ಎಲ್ಲವನ್ನು ವಿವರಿಸಿದ್ದಾರೆ. ಎಲ್ಲವನ್ನು ಆಲಿಸಿದ ಸಚಿವರು ನೌಕರರನ್ನು ಅವರ ಮೂಲಸ್ಥಾನಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ವಜಾಗೊಂಡಿರುವ 2010 ಮಂದಿ ನೌಕರರಲ್ಲಿ 1774 ನೌಕರರ ವಜಾ ಆದೇಶವನ್ನು ವಾಪಸ್ ಪಡೆದು ಅವರನ್ನೂ ಕೂಡ ಮಾತೃ ಘಟಕದಲ್ಲೇ ಸೇವೆಗೆ ನಿಯೋಜಿಸಲಾಗುವುದು. ಇನ್ನು ಉಳಿದ ವಜಾಗೊಂಡಿರುವ ನೌಕರರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ ಅಮಾನತುಗೊಳಿಸಿದ ಬಳಿಕ ನೌಕರರ ಅಮಾನತು ಆದೇಶವನ್ನು ಹಿಂಪಡೆದು ಮಾತೃ ಘಟಕದಿಂದ ಬೇರೆಡೆಗೆ ವರ್ಗಾವಣೆ ಮಾಡಿರುವ ನೌಕರರನ್ನು ಅವರ ಮಾತೃ ಘಟಕಕ್ಕೇ ವರ್ಗಾವಣೆ ಮಾಡಲಾಗುವುದು ಎಂದೂ ಕೂಡ ತಿಳಿಸಿದ್ದಾರೆ.
ಇನ್ನು ಮುಷ್ಕರದ ಸಮಯದಲ್ಲಿ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರದಿಂದ ಸಾವಿರಾರು ನೌಕರರ ಕುಟುಂಬಗಳು ಸಮಸ್ಯೆಯಲ್ಲಿ ಸಿಲುಕಿವೆ. ಹೀಗಾಗಿ ಈ ಎಲ್ಲವನ್ನು ಬಹಳ ಹತ್ತಿರದಿಂದ ನೋಡಿರುವ ಸಚಿವ ಶ್ರೀರಾಮುಲು ಅವರು ನೌಕರರಿಗೆ ತೊಂದರೆ ಆಗದ ರೀತಿಯಲ್ಲಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ನೀಡಿದ್ದರು.
ಆ ಭರವಸೆಯಂತೆಯೇ ಬಹುತೇಕ ಎಲ್ಲ ನೌಕರರನ್ನು ( ಪೊಲೀಸ್ ಪ್ರಕರಣಗಳಿರುವ ನೌಕರರ ಹೊರತುಪಡಿಸಿ) ನಾಳೆ ಸಂಜೆಯೊಳಗೆ ವಾಪಸ್ ತೆಗೆದುಕೊಳ್ಳಲಾಗಿದೆ ಎಂಬ ಆದೇಶ ಹೊರಡಿಸುವುದು ಬಹುತೇಕ ಖಚಿತವಾಗಿದೆ.
ಹೀಗಾಗಿ ನಾಳೆ (ಸೆ.16) ಸಾರಿಗೆ ನಿಗಮದ ಎಲ್ಲ ನೌಕರರಿಗೂ ಇದು ಸಿಹಿ ಸುದ್ದಿಯಾಗಲಿದ್ದು, ಇದರಿಂದ ನೊಂದ ನೌಕರರ ಕುಟುಂಬಗಳು ಆನಂದಬಾಷ್ಪದಿಂದ ಸಂತಸ ಹಂಚಿಕೊಳ್ಳುವ ಕಾಲ ಬಂದಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದು ಬಂದಿದೆ.