ಬೆಂಗಳೂರು: ಮಗುವಿನ ದಾಖಲಾತಿಗೆಂದು ಶಾಲೆಗೆ ಬಂದ ಮಹಿಳೆಯೊಬ್ಬರಿಂದ ಮಸಾಜ್ ಮಾಡಿಸಿಕೊಂಡ ಆರೋಪದ ಮೇರೆಗೆ ಬಿಬಿಎಂಪಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಧ್ಯಾಯರೊಬ್ಬರನ್ನು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಲೋಕೇಶಪ್ಪ ಮಸಾಜ್ ಮಾಡಿಸಿಕೊಂಡ ಆರೋಪ ಎದುರಿಸುತ್ತಿರುವವರು. ಈ ಸಂಬಂಧ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿಶೇಷ ಆಯುಕ್ತರು ಆದೇಶ ಮಾಡಿದ್ದಾರೆ.
ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಲೋಕೇಶಪ್ಪ ಪ್ರಭಾರದ ಮೇಲೆ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮಗುವಿನ ದಾಖಲಾತಿಗೆಂದು ಮಹಿಳೆಯೊಬ್ಬರು ಶಾಲೆಗೆ ಬಂದಿದ್ದರು.
ಈ ವೇಳೆ ಮಹಿಳೆಯಿಂದ ತಾವು ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಕಟ್ಟಡದಲ್ಲಿ ಮಸಾಜ್ ಮಾಡಿಕೊಂಡಿರುವ ಸಂಬಂಧ ದೃಶ್ಯಾವಳಿಗಳು ಸೆ.22 ರಂದು ಸಾರ್ವಜನಿಕ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಸಂಬಂಧ ಲೋಕೇಶಪ್ಪ ಅವರನ್ನು ಖುದ್ದು ವಿಚಾರಿಸಿದ್ದು, ಮಸಾಜ್ ಮಾಡಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯ ಸರ್ಕಾರಿ ಕಟ್ಟಡವನ್ನು ತಮ್ಮ ಖಾಸಗಿ ಕೆಲಸಕ್ಕೆ ಬಳಸಿಕೊಂಡಿರುವುದು ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿರುವುದರಿಂದ ಕರ್ನಾಟಕ ನಾಗರಿಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತುಪಡಿಸಲಾಗಿದೆ ಹಾಗೂ 1958ರ ಕೆ.ಸಿ.ಎಸ್.ಆರ್ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ತಿಳಿಸಿದ್ದಾರೆ.