ಹೊಸಪೇಟೆ: ಕರ್ನಾಟಕದ 31ನೇ ಮತ್ತು ನೂತನ ಜಿಲ್ಲೆಯಾಗಿ ಇಂದು (ಅಕ್ಟೋಬರ್ 2) ವಿಜಯನಗರ ಜಿಲ್ಲೆ ಲೋಕಾರ್ಪಣೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಜಿಲ್ಲೆಯ ಕೇಂದ್ರ ಸ್ಥಾನವಾದ ಹೊಪೇಟೆಯಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ್ದಾರೆ.
6 ತಾಲೂಕುಗಳನ್ನು ಒಳಗೊಂಡ ನೂತನ ವಿಜಯನಗರ ಜಿಲ್ಲೆ ಈ ಮೂಲಕ ಲೋಕಾರ್ಪಣೆಗೊಂಡಿದ್ದು, ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮ ಕೂಟ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಮಠಾಧೀಶರು ಭಾಗಿಯಾಗಿದ್ದರು.
ಸಿಎಂ ಬೊಮ್ಮಾಯಿ ವಿಜಯಸ್ತಂಭ ಅನಾವರಣ, ನೂತನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಇನ್ನು ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆಯನ್ನು ಇದೇ ವೇದಿಕೆಯಲ್ಲಿ ಮಾಡಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಜಾಲತಾಣ ಉದ್ಘಾಟನೆಯೂ ಕೂಡ ಆಯಿತು.
ವಿಜಯನಗರ ನೂತನ ಜಿಲ್ಲೆ ಮಾಡುವ ಮೂಲಕ ಸಚಿವ ಆನಂದ್ ಸಿಂಗ್ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಸಿಂಗ್ ನೂತನ ಜಿಲ್ಲೆಗೆ ರಾಜಕೀಯ ಜೀವನ ಮುಡಿಪಾಗಿಟ್ಟರು. ನೂತನ ಜಿಲ್ಲೆಯ ರಚನೆಗೆ ಕಾರಣರಾದ ಸಿಂಗ್ಗೆ ಅಭಿನಂದನೆ ಎಂದು ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದು, ಈ ಮೂಲಕ ಸಚಿವ ಆನಂದ್ ಸಿಂಗ್ ಸಂಭ್ರಮ ಪಡುವ ಘಳಿಗೆಯಾಗಿದೆ.