ಮುಂಬೈ: ತೀವ್ರ ಸಂಚಲನ ಸೃಷ್ಟಿಸಿರುವ ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಜನರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ಕುರಿತು ಎನ್‍ಸಿಬಿ ಮುಖ್ಯಸ್ಥ ಎಸ್.ಎನ್.ಪ್ರಧಾನ್ ಅವರು ಮಾಹಿತಿ ನೀಡಿದ್ದು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ 8 ಜನರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಅರ್ಯನ್ ಖಾನ್ ಸಹ ಒಬ್ಬ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ತನಿಖೆ ಚುರುಕುಗೊಳಿಸಿರುವ ಎನ್‍ಸಿಬಿ, ಉದ್ಯಮಿಗಳ ಮೂವರು ಪುತ್ರಿಯರು ಸೇರಿ ಈ ವರೆಗೆ 13 ಜನರನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರು ನೀಡಿದ ಮಾಹಿತಿ ಆಧಾರದ ಮೇಲೆ 8 ಜನರನ್ನು ಬಂಧಿಸಿದ್ದಾರೆ.
ಸಮುದ್ರದಲ್ಲಿ ಹಡಗಿನಲ್ಲಿ ತೇಲುತ್ತ ಬಾಲಿವುಡ್ ನಟರು, ಉದ್ಯಮಿಗಳ ಮಕ್ಕಳು ಡ್ರಗ್ಸ್ ಪಾರ್ಟಿ ಮಾಡಿದ್ದರು. ಐಷಾರಾಮಿ ಹಡಗಿನಲ್ಲಿ ಎನ್‍ಸಿಬಿ ಕಾರ್ಯಾಚರಣೆಯೇ ರೋಚಕವಾಗಿತ್ತು.
ಎನ್‍ಸಿಬಿ ಸಮೀರ್ ವಾಂಖೆಡೆ ಟೀಮ್ ಮಾರುವೇಷದಲ್ಲಿ ಹಡಗಿನಲ್ಲಿ ಪ್ರಯಾಣಿಸಿ ಆಪರೇಷನ್ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಯಶಸ್ವಿ ಸಹ ಆಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಸೇರಿದಂತೆ ಹಲವು ಪ್ರತಿಷ್ಟಿತರ ಮಕ್ಕಳನ್ನು ವಶಕ್ಕೆ ಪಡೆದಿತ್ತು.
ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯದಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ.
ಡ್ರಗ್ಸ್ ರೇವ್ ಪಾರ್ಟಿ ಮಾಡುತ್ತಿದ್ದ ಶಾರುಖ್ ಖಾನ್ ಪುತ್ರ ಸೇರಿ ಒಟ್ಟು 13 ಮಂದಿಯನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ನಂತರ ಶನಿವಾರ ರಾತ್ರಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಎನ್ಸಿಬಿ ಆರ್ಯನ್ ಖಾನ್ ಅವರನ್ನು ಪ್ರಶ್ನಿಸುತ್ತಿದೆ. ಆರ್ಯನ್ ಖಾನ್ ವಿರುದ್ಧ ಯಾವುದೇ ಆರೋಪಗಳನ್ನು ದಾಖಲಿಸಲಾಗಿಲ್ಲ ಮತ್ತು ಇದುವರೆಗೂ ಬಂಧಿಸಲಾಗಿಲ್ಲ ಎಂದು ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ.
ಆರ್ಯನ್ ಖಾನ್ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮೊದಲ ಮಗ. ಈ ದಂಪತಿಗೆ ಸುಹಾನಾ ಖಾನ್ ಎಂಬ ಮಗಳು ಮತ್ತು ಮಗ ಅಬ್ರಾಮ್ ಕೂಡ ಇದ್ದಾರೆ.