ಕೊಲ್ಕತ್ತಾ: ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯ ಮತ ಎಣಿಕೆ ಭಾನುವಾರ ಬೆಳಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಆರಂಭವಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ಮುನ್ನಡೆ ಸಾಧಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಿಎಂ ಪದವಿಯನ್ನು ಭದ್ರಪಡಿಸಿಕೊಳ್ಳುವ ನಿರ್ಧರಿತ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 11ನೇ ಸುತ್ತಿನಲ್ಲಿ 34 ಸಾವಿರ ಮತಗಳ ಭಾರೀ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ತಮ್ಮ ನಾಯಕಿ ಗೆಲ್ಲುವುದು ನಿಚ್ಛಳ ಎಂದು ಗೊತ್ತಾಗುತ್ತಿದ್ದಂತೆ ಟಿಎಂಸಿ ಅಭಿಮಾನಿಗಳು ಮೈಗೆ, ಮುಖಕ್ಕೆ ಬಣ್ಣ ಹಚ್ಚಿಕೊಂಡು ಕೋಲ್ಕತ್ತಾದಲ್ಲಿರುವ ಮಮತಾ ನಿವಾಸದ ಮುಂದೆ ಜಮಾಯಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿಯವರ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕಾ ತಿಬ್ರೆವಾಲ್ ಸ್ಪರ್ಧಿಸಿದ್ದು ಅವರು ಸೋಲುವುದು ಬಹುತೇಕ ಖಚಿತವಾಗಿದೆ. ಸಂಸರ್ ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೂಡ ಟಿಎಂಸಿ ಮುನ್ನಡೆಯಲ್ಲಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರು ದಕ್ಷಿಣ ಕೊಲ್ಕತ್ತಾದ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಪ್ರಿಯಾಂಕಾ ತಿಬ್ರೇವಾಲ್ ಮತ್ತು ಸಿಪಿಐ(ಎಂ)ನ ಶ್ರೀಜಿಬ್ ಬಿಸ್ವಾಸ್ ವಿರುದ್ಧ ಸ್ಪರ್ಧಿಸಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿಯ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರು. ಆದರೆ ಮಮತಾ ಬ್ಯಾನರ್ಜಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಆರು ತಿಂಗಳೊಳಗೆ ಚುನಾಯಿತರಾಗಬೇಕು. ಹೀಗಾಗಿ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದ ಭವಾನಿಪುರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.