ಕೆ.ಆರ್.ಪೇಟೆ: ತಾಲೂಕಿನ ತೆಂಡೇಕೆರೆ ಗ್ರಾಮದ ಬಾಲಕನೊಬ್ಬ ತಾನು ಸಾಕಿದ್ದ ಮೇಕೆಯನ್ನು ನಾಯಿಯಿಂದ ರಕ್ಷಿಸಲು ಹೋದ ವೇಳೆ ಆಕಸ್ಮಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತೆಂಡೇಕೆರೆ ಗ್ರಾಮದ ನಿವಾಸಿ ಭೀಮೇಗೌಡ ಎಂಬುವರ ಪುತ್ರ ರಾಕೇಶ್ (17) ಮೃತ ಬಾಲಕ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ತಾನು ಸಾಕಿದ್ದ ಮೇಕೆಯನ್ನು ನಾಯಿಯೊಂದು ಓಡಿಸಿಕೊಂಡು ಹೋದ ಪರಿಣಾಮ ಅದನ್ನು ರಕ್ಷಿಸಲು ಹೋಗಿದ್ದಾನೆ.
ಈ ವೇಳೆ ಮೇಕೆಯು ನಾಯಿಯಿಂದ ರಕ್ಷಿಸಿಕೊಳ್ಳಲು ಕೆರೆಯ ನೀರಿನೊಳಗೆ ಹೋಗಿದೆ. ಮೇಕೆಯನ್ನು ರಕ್ಷಿಸಲು ರಾಕೇಶ್ ಸಹ ಕೆರೆಯೊಳಗೆ ಹೋಗಿದಾಗ ಈ ಅವಘಡ ಸಂಭವಿಸಿದೆ.
ಮೇಕೆಯು ಈಜಿ ಮತ್ತೊಂದು ದಡ ಸೇರಿದರೆ ಕೆರೆಯಲ್ಲಿ ಹುಲ್ಲು ಮತ್ತು ಸತ್ತೆ ಹೆಚ್ಚಾಗಿದ್ದರಿಂದ ರಾಕೇಶ್ ಕಾಲಿಗೆ ಹುಲ್ಲು ಸತ್ತೆ ಸುತ್ತಿಕೊಂಡು ಈಜಲಾಗದೆ ನೀರಿನಲ್ಲಿ ಮುಳುಗಿ ಅಸುನೀಗಿದ್ದಾನೆ.
ವಿಷಯ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಠಾಣೆಯ ಅಧಿಕಾರಿ ಶಿವಣ್ಣ ನೇತೃತ್ವದ ಅಗ್ನಿಶಾಮಕ ತಂಡ ಕಾರ್ಯಾಚರಣೆ ಆರಂಭಿಸಿ ಶವವನ್ನು ಹುಡುಕುವ ಪ್ರಯತ್ನ ಮಾಡಿ ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಶವವನ್ನು ಹೊರತೆಗೆದಿದ್ದಾರೆ.
ಘಟನೆ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.