ಬೆಳಗಾವಿ: ಸಿಂದಗಿ ಹಾಗೂ ಹಾನಗಲ್ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಿಂದಗಿಯಲ್ಲಿ ಪ್ರಚಾರ ಮಾಡಿ ಇವತ್ತು ಬೆಂಗಳೂರು ಹೋಗುತ್ತಿದ್ದೇನೆ. ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಇಂದು ಸಂಜೆ ಹಾನಗಲ್ಗೆ ವಾಪಾಸ್ ಆಗ್ತೇನೆ ಎಂದು ತಿಳಿಸಿದರು.
ಇನ್ನು ಮೂರು ದಿನಗಳು ಹಾನಗಲ್ನಲ್ಲಿ ಉಳಿದುಕೊಂಡು ಪ್ರಚಾರ ಮಾಡುತ್ತೇನೆ. 23ರಂದು ಬೆಳಗಾವಿಗೆ ಬಂದು ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಭಾಗಿಯಾಗುತ್ತೇನೆ. ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಅದ್ದೂರಿ ರಾಜ್ಯೋತ್ಸವ ಆಚರಣೆ ಕುರಿತು ಕನ್ನಡಪರ ಸಂಘಟನೆಗಳ ಒತ್ತಾಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅದರ ಬಗ್ಗೆ ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಕೋವಿಡ್ ಕಡಿಮೆಯಾದ ಹಿನ್ನೆಲೆ ಮೆರವಣಿಗೆ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ತಗೆದುಕೊಳ್ಳಲಾಗುವುದು. ಈ ಕುರಿತು ತಜ್ಞರ ಜತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಕಿತ್ತೂರು ಕರ್ನಾಟಕ ಘೋಷಣೆ ಮಾಡುವ ವಿಚಾರ ಸಂಬಂಧದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನವಾಗಬೇಕು ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.