ಬೆಂಗಳೂರು: ಏಪ್ರಿಲ್ 2021ರ ಮುಷ್ಕರದ ವೇಳೆ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡಬೇಕು. ವರ್ಗಾವಣೆ ಮಾಡಿರುವ ಎಲ್ಲಾ ಕಾರ್ಮಿಕರನ್ನು ವಾಪಸ್ಸು ತರಬೇಕು. ಅಮಾನತು ತೆರವು ಮಾಡಿ ಎಲ್ಲಾ ಶಿಸ್ತು ಪ್ರಕ್ರಿಯೆಗಳನ್ನು ರದ್ದು ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ ಅಕ್ಟೋಬರ್ 27ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಇನ್ನು ಏಪ್ರಿಲ್ನಲ್ಲಿ ನಡೆದ ಮುಷ್ಕರದ ಅವಧಿಯ ಗೈರು ಹಾಜರಿಗೆ ವಿಧಿಸುತ್ತಿರುವ ಶಿಕ್ಷೆಗಳನ್ನು ರದ್ದುಗೊಳಿಸಿ. ಸುಳ್ಳು ಪೊಲೀಸ್ ಮೊಕದ್ದಮೆಗಳನ್ನು ವಾಪಸ್ಸು ಪಡೆಯಿರಿ. ನಿಗದಿತ ದಿನಾಂಕದಲ್ಲಿ ಪೂರ್ಣ ವೇತನ ನೀಡಿ. ಅನ್ಯಾಯ ಮತ್ತು ದೌರ್ಜನ್ಯದ ಆಡಳಿತವನ್ನು ನಿಲ್ಲಿಸಿ. ಕಿರುಕುಳಗಳನ್ನು ತಪ್ಪಿಸಿ ಎಂದು ಆಗ್ರಹಿಸಿ ಈ ಧರಣಿ ನಡೆಯುತ್ತಿದೆ.
ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಭಾದಿತ ಕಾರ್ಮಿಕರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ. ಜತೆಗೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳು ಮತ್ತು ಕಾರ್ಮಿಕರು ಬೆಂಬಲಿಸಬೇಕು ಎಂದು ಕ.ರಾ.ರ.ಸಾ ನಿಗಮಗಳ ನೌಕರರ ಫೆಡರೇಷನ್ ಮನವಿ ಮಾಡಿದೆ.
ಕ.ರಾ.ರ.ಸಾ. ನಿಗಮಗಳಲ್ಲಿ 1996 ರಿಂದ ಇಲ್ಲಿಯವರೆಗೂ ಕಾರ್ಮಿಕರ ವೇತನ ಹೆಚ್ಚಳ ಮತ್ತಿತರೆ ಸೇವಾ ಸೌಲಭ್ಯಗಳ ಬಗ್ಗೆ ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ, ನ್ಯಾಯಸಮ್ಮತವಾಗಿ, ಕಾನೂನಿನ ಅನ್ವಯ ಒಪ್ಪಂದ ಆಗಿಲ್ಲ.
4 ವರ್ಷಗಳಿಗೊಮ್ಮೆ ವೇತನ ಹೆಚ್ಚಳ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಒಪ್ಪಂದ ಆಗಬೇಕು ಎಂಬ ದ್ವಿಪಕ್ಷೀಯ ಒಪ್ಪಂದವಿದ್ದರೂ ಸಹ ಈ ಪ್ರಕ್ರಿಯೆಗೆ ತಿಲಾಂಜಲಿ ನೀಡಲಾಗಿದೆ. ನೂರಾರು ಸುತ್ತೋಲೆಗಳನ್ನು ಆಡಳಿತ ವರ್ಗಗಳು ತಮಗೆ ಬೇಕಾದ ರೀತಿಯಲ್ಲಿ ಜಾರಿಗೊಳಿಸಿ ಕಾರ್ಮಿಕರು ನಿರಂತರವಾಗಿ ಕಿರುಕುಳಗಳನ್ನು ಅನುಭವಿಸುವಂತಾಗಿದೆ.
ಸರ್ಕಾರಗಳು 4 ವರ್ಷಗಳಿಗೊಮ್ಮೆ ತಮಗೆ ತೋಚಿದಷ್ಟು ವೇತನ ಹೆಚ್ಚಳ ಮಾಡಿ ಏಕಪಕ್ಷೀಯವಾಗಿ ಘೋಷಿಸಿ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇಂತಹ ಕ್ರಮಗಳಿಂದ ಅತ್ಯಂತ ಕಷ್ಟಪಟ್ಟು ಹಗಲು-ರಾತ್ರಿ-ಹಬ್ಬ-ಹರಿದಿನಗಳೆನ್ನದೆ ದುಡಿಯುವ ಸಾರಿಗೆ ಕಾರ್ಮಿಕರಿಗೆ ಇತರೆ ಮಂಡಳಿಗಳು ಹಾಗೂ ಸರ್ಕಾರಿ ನೌಕರರ ವೇತನಕ್ಕಿಂತ ಶೇ.40 ಕಡಿಮೆ ವೇತನವಿದೆ.
ಸರ್ಕಾರಗಳ ಮತ್ತು ಆಡಳಿತ ವರ್ಗಗಳ ಕಾರ್ಮಿಕ ವಿರೋಧಿ ನೀತಿಗಳಿಂದ ಬೇಸತ್ತ ಕಾರ್ಮಿಕರು ಡಿಸೆಂಬರ್-2020 ಮತ್ತು ಏಪ್ರಿಲ್-2021 ರ ಮುಷ್ಕರದಲ್ಲಿ ಪಾಲ್ಗೊಂಡರು. ಈ ಸಮಯದಲ್ಲಿಯೂ ಸರ್ಕಾರ ಕಾರ್ಮಿಕರ ಬೇಡಿಕೆಗಳನ್ನು ಮಾತುಕತೆಗಳ ಮೂಲಕ ಚರ್ಚಿಸಿ ಇತ್ಯರ್ಥಪಡಿಸಲು ಮುಂದಾಗಲಿಲ್ಲ. ಸರ್ಕಾರ ಮುಷ್ಕರವನ್ನು ಕಡೆಗಣಿಸಿ ಕಠಿಣ ನಿಲುವನ್ನು ತೆಗೆದುಕೊಂಡಿತು. ಇದರ ಪರಿಣಾಮ ಸಾವಿರಾರು ಕಾರ್ಮಿಕರ ವಜಾ-ವರ್ಗಾವಣೆ-ಅಮಾನತ್ತು- ಪೊಲೀಸ್ ಮೊಕದ್ದಮ್ಮೆ ಹಾಕಿಸುವುದು ಮುಂತಾದ ಸೇಡಿನ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಿಂದ ನ್ಯಾಯಾಲಯದ ಮಧ್ಯಪ್ರವೇಶಿಸಿದ ನಂತರ ಮುಷ್ಕರವನ್ನು ಅಂತ್ಯಗೊಳಿಸಲಾಯಿತು. ಮುಷ್ಕರದ ನಂತರ ಆಡಳಿತ ವರ್ಗ 25-04-2021 ರಂದು ಕ.ರಾ.ರ.ಸಾ. ನಿಗಮಗಳ ನೌಕರರ ಫೆಡರೇಷನ್ (CITU) ನ ಸಭೆ ಕರೆಯಲಾಯಿತು. ನಮ್ಮ ಸಂಘವು ಅಂದು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಮುಷ್ಕರದ ವೇಳೆಯಲ್ಲಿ ಕಾರ್ಮಿಕರ ಮೇಲಿನ ಎಲ್ಲಾ ಶಿಕ್ಷಾದೇಶಗಳನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದೆವು.
ಸಾರಿಗೆ ನಿಗಮಗಳು ಈ ರಾಜ್ಯದ ಜನರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸುವ ಸಂಸ್ಥೆಗಳಾಗಿದ್ದು, ಈ ಉದ್ದೇಶ ಸಫಲವಾಗಬೇಕಾದರೆ ಸಾರಿಗೆ ನಿಗಮಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಇರಬೇಕು. ಸಂಸ್ಥೆಗಳಲ್ಲಿ ಕಾರ್ಮಿಕ ಸ್ನೇಹಿ ಆಡಳಿತ ಇದ್ದು, ಉತ್ತಮ ಕೈಗಾರಿಕಾ ಬಾಂಧವ್ಯ ಇದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ಈಡೇರಲು ಸಾಧ್ಯ.
ಮುಷ್ಕರದ ಅವಧಿಯಲ್ಲಿ ಹತ್ತಾರು ಸಾವಿರ ಕಾರ್ಮಿಕರ ಮೇಲೆ ಸೇಡಿನ ಕ್ರಮ ತೆಗೆದುಕೊಂಡಿರುವುದರಿಂದ ಕೈಗಾರಿಕಾ ಶಾಂತಿ ಇಲ್ಲವಾಗಿದೆ. ಆದ್ದರಿಂದ ಸೇಡಿನ ಕ್ರಮದಿಂದ ತೆಗೆದುಕೊಂಡ ಎಲ್ಲಾ ಶಿಕ್ಷಾದೇಶಗಳನ್ನು ರದ್ದುಪಡಿಸಬೇಕು. ಈ ಮೂಲಕ ಕೈಗಾರಿಕಾ ಶಾಂತಿ ಕಾಪಾಡಬೇಕೆಂದು ಒತ್ತಾಯಿಸಿದೆವು. ಆದರೆ ಸರ್ಕಾರ ಮತ್ತು ಆಡಳಿತ ವರ್ಗಗಳು ಕಾರ್ಮಿಕರ ಮೇಲಿನ ಸೇಡಿನ ಕ್ರಮಗಳನ್ನು ಮುಂದುವರಿಸಿದ್ದಾರೆ.
ಮುಷ್ಕರದ ಅವಧಿಯನ್ನು ಗೈರು-ಹಾಜರಿ ಎಂದು ಪರಿಗಣಿಸಿ ರೂ.2000 ರಿಂದ ರೂ.10,000 ರೂ.ಗಳವರೆಗೆ ಹತ್ತಾರು ಸಾವಿರ ಕಾರ್ಮಿಕರಿಗೆ ದಂಡ ವಿಧಿಸುವುದು, ಮೇ-ಜೂನ್ ತಿಂಗಳು 2021 ನಿವೃತಿಯಾದ ಕಾರ್ಮಿಕರಿಗೆ 5 ಇಂಕ್ರಿಮೆಂಟ್ ಕಡಿತ ಮಾಡಲಾಗಿದೆ. ದೌರ್ಜನ್ಯ ಹಾಗೂ ಕಿರುಕುಳಗಳು ದಿನೇ ದಿನೇ ಹೆಚ್ಚಳವಾಗುತ್ತಲೇ ಇವೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಫೆಡರೇಷನ್ ವತಿಯಿಂದ ಸೆ.20 ರಂದು ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಅಂದು ಸಾರಿಗೆ ಸಚಿವರು ಫೆಡರೇಷನ್ ನಿಯೋಗವನ್ನು ವಿಧಾನಸೌಧಕ್ಕೆ ಕರೆಸಿಕೊಂಡು ಮನವಿ ಪತ್ರವನ್ನು ಸ್ವೀಕರಿಸಿದರು ಹಾಗೂ ಮುಷ್ಕರದ ವೇಳೆಯಲ್ಲಿನ ಕಾರ್ಮಿಕರ ಮೇಲಿನ ಎಲ್ಲಾ ಕ್ರಮಗಳನ್ನು ವಾಪಸ್ಸು ಪಡೆಯುವುದಾಗಿ ಭರವಸೆ ನೀಡಿದರು. ಸೆ.21- 2021 ರಂದು ಸಾರಿಗೆ ನಿಗಮಗಳಲ್ಲಿನ ಎಲ್ಲಾ ಸಂಘಗಳ ಮುಖಂಡರ ಜೊತೆ ಸಭೆ ನಡೆಸುವುದಾಗಿ ತಿಳಿಸಿದರು.
ಅದರಂತೆ ಸಾರಿಗೆ ಸಚಿವರ ಮನೆಯಲ್ಲಿ ಸೆ. 21 ರಂದೇ ಸಭೆ ನಡೆಸಿದರು. ಎಲ್ಲಾ ಸಂಘಗಳ ಮುಖಂಡರ ಮಾತುಗಳನ್ನು ಆಲಿಸಿದರು. CITU ಫೆಡರೇಷನ್ ವತಿಯಿಂದ ಸಾರಿಗೆ ನಿಗಮಗಳಲ್ಲಿನ ಕಾರ್ಮಿಕರ ಸಂಕಷ್ಟಗಳನ್ನು ಸಚಿವರ ಗಮನಕ್ಕೆ ತಂದೆವು. ಮುಷ್ಕರದ ವೇಳೆಯಲ್ಲಿನ ಎಲ್ಲಾ ಶಿಕ್ಷಾದೇಶಗಳನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿದೆವು. ಸೇವೆಯಿಂದ ವಜಾ ಆದ ಕಾರ್ಮಿಕರು ಮತ್ತು ಅವರ ಕುಟುಂಬದವರು ಅನುಭವಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ವಿವರಿಸಿದೆವು.
ಈ ಸಭೆಯಲ್ಲಿ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ಸಹ ಇದ್ದರು. ಅಂತಿಮವಾಗಿ ಸಾರಿಗೆ ಸಚಿವರು ಎಲ್ಲಾ ಕಾರ್ಮಿಕ ಸಂಘಗಳ ಮುಖಂಡರ ಸಮ್ಮುಖದಲ್ಲಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡುವುದಾಗಿ ಹಾಗೂ ಇತರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಿಸಿದರು. ಮುಖ್ಯಮಂತ್ರಿಯವರು ಸಹ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಎಂದು ನನಗೆ ತಿಳಿಸಿದ್ದಾರೆ ಎಂದರು.
ಸಚಿವರು ವಿಧಾನಸಭೆ ಅಧಿವೇಶನದಲ್ಲಿಯೂ ಸಹ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಿಸಿದರು. ಸಾರಿಗೆ ನಿಗಮಗಳ ಕಾರ್ಮಿಕರು ಸಚಿವರ ಹೇಳಿಕೆಯಿಂದ ಸಂಭ್ರಮಗೊAಡರು. ಆದರೆ ಬಿಎಂಟಿಸಿ ಆಡಳಿತವರ್ಗ ಈ ನಡುವೆಯೇ ಪುನಃ 57 ಕಾರ್ಮಿಕರನ್ನು ಸೆ. 27 ರಂದು ವಜಾಗೊಳಿಸಿತು. ಇಂತಹ ಆಡಳಿತ ಕ್ರಮವನ್ನು ಖಂಡಿಸಿ ಸಾರಿಗೆ ಸಚಿವರಿಗೆ ಸೆ.30- ರಂದು ಫೆಡರೇಷನ್ ನಿಂದ ಪತ್ರ ನೀಡಿದೆವು.
ಈಗಾಗಲೇ 6 ತಿಂಗಳು ಕಳೆದರೂ ಸಹ ಸೇವೆಯಿಂದ ವಜಾ ಮಾಡಿದ ಕಾರ್ಮಿಕರನ್ನು ಪುನರ್ ನೇಮಕ ಮಾಡಿರುವುದಿಲ್ಲ ಹಾಗೂ ಇನ್ನಿತರೆ ಸೇಡಿನ ಕ್ರಮಗಳನ್ನು ವಾಪಸ್ಸು ಪಡೆದಿರುವುದಿಲ್ಲ. ಹತ್ತಾರು ಬಾರಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಹಲವು ಬಾರಿ ಬಹಿರಂಗವಾಗಿ ಮತ್ತು ಕಾರ್ಮಿಕ ಸಂಘಗಳ ಮುಖಂಡರ ಸಮ್ಮುಖದಲ್ಲೇ ತಿಳಿಸಿದ್ದಾರೆ. ಆದರೂ ಸೇವೆಯಿಂದ ವಜಾ ಆದವರಿಗೆ ಪುನರ್ ನೇಮಕ ಆದೇಶ ನೀಡಿರುವುದಿಲ್ಲ. ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಿಲ್ಲ.
ಹೀಗಾಗಿ ಇದೇ ಅಕ್ಟೋಬರ್ 27 ರಿಂದ ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಚ್.ಡಿ.ರೇವಪ್ಪ, ಉಪಾಧ್ಯಕ್ಷರಾದ ನಾಗರಾಜ್ ಎಂ. ಡಾ. ಪ್ರಕಾಶ್ ಕೆ., ಪ್ರ.ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಸೇರಿದಂತೆ ಫೆಡರೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.