ಶಿವಮೊಗ್ಗ: ಕೆಪಿಟಿಸಿಎಲ್ ಹೈಟೆನ್ಷನ್ ಲೈನ್‍ಗೆ ಮರಗಳು ತಗುಲಿದ ಪರಿಣಾಮ ಭಾರಿ ಸ್ಫೋಟದ ಸದ್ದು ಕೇಳಿಸಿ, ಬೆಂಕಿ ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ರಂಗಪ್ಪನ ಗುಡ್ಡದಲ್ಲಿ ನಡೆದಿದೆ.
ಶರಾವತಿ ಜಲ ವಿದ್ಯುತ್ ಯೋಜನೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಿಗೆ ರಂಗಪ್ಪನ ಗುಡ್ಡದ ಮಾರ್ಗವಾಗಿ ಹೈಟೆನ್ಷನ್ ವಿದ್ಯುತ್ ಲೈನ್ ಹಾದು ಹೋಗಿದೆ.
ಈ ಗುಡ್ಡದಲ್ಲಿ ಅರಣ್ಯ ಇಲಾಖೆಗೆ ಸೇರಿದ ಬೃಹತ್ ಪ್ರಮಾಣದ ಅಕೇಶಿಯಾ ಮರಗಳು ಬೆಳೆದಿವೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಪಿಟಿಸಿಎಲ್ ಇಲಾಖೆಯ ನಿರ್ಲಕ್ಷ್ಯತನದಿಂದ ಆಗಾಗ ಇಂತಹ ಅವಘಡಗಳು ಸಂಭವಿಸುತ್ತಿರುತ್ತವೆ. ಅಲ್ಲದೇ ಇಂತಹ ಅವಘಡಗಳಿಂದ ಸ್ಥಳೀಯ ನಿವಾಸಿಗಳಿಗೆ ನಷ್ಟ ಹಾಗೂ ಆತಂಕ ಎರಡು ಆಗುತ್ತಿದೆ.
ಇಷ್ಟಾದರೂ ಈ ಬಗ್ಗೆ ಸರ್ಕಾರವಾಗಲಿ, ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಇನ್ನಾದರೂ ಕೆಪಿಟಿಸಿಎಲ್ ಹಾಗೂ ಅರಣ್ಯ ಸಿಬ್ಬಂದಿ ಸಮನ್ವಯತೆಯಿಂದ ಕೆಲಸ ನಿರ್ವಹಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.