ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಸಿಐಟಿಯು ನೇತೃತ್ವದಲ್ಲಿ ಬುಧವಾರದಿಂದ (ಅ.27) ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ.
ಸಾರಿಗೆ ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಅವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು ಸಚಿವರ ಹೇಳಿಕೆಯನ್ನು ವಿವರಿಸಿದ ಬಳಿಕ ಧರಣಿ ವಾಪಸ್ ಪಡೆದಿರುವುದಾಗಿ ಘೋಷಿದರು.
ನವೆಂಬರ್ 2ರಂದು ಸಚಿವರು ಸಭೆ ಕರೆದು ಒಂದು ತಿಂಗಳೊಳಗೆ ಎಲ್ಲವನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ನೀವು ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಅವರ ಮನವಿಗೆ ಧರಣಿ ನಿರತ ನೌಕರರು ಸ್ಪಂದಿಸಿದರು.
ಇನ್ನು ಒಂದು ವೇಳೆ ನವೆಂಬರ್ 2ರಂದು ನಡೆಯುವ ಸಭೆಯಲ್ಲಿ ನೌಕರರ ಬೇಡಿಕೆಗೆ ತಕ್ಕ ಪ್ರತಿಕ್ರಿಯೆ ಬರದಿದ್ದರೆ ಮತ್ತೆ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಮುಂದುವರಿಸುವುದಾಗಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಈ ಹಿಂದೆ ನಡೆದ ಮುಷ್ಕರದ ವೇಳೆ ವಜಾ, ವರ್ಗಾವಣೆ ಮತ್ತು ಅಮಾನತು ಆಗಿರುವ ನೌಕರರನ್ನು ವಾಪಸ್ ಮೂಲ ಸ್ಥಳಕ್ಕೆ ಕರೆಸಿಕೊಳ್ಳಬೇಕು. ಜತೆಗೆ ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದು, ಅದರಂತೆ ಸಚಿವರು ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಒಂದು ತಿಂಗಳೊಳಗಾಗಿ ಎಲ್ಲರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿರುವುದಾಗಿ ರಾಘವೇಂದ್ರ ತಿಳಿಸಿದರು.
ಹೀಗಾಗಿ ಸಚಿವರಿಗೆ ಒಂದು ತಿಂಗಳು ಕಾಲವಕಾಶಕೊಡಿ ಎಲ್ಲವನ್ನು ಸರಿ ಪಡಿಸುತ್ತಾರೆ ಎಂದು ಪ್ರತಿಭಟನಾ ನಿರತ ನೌಕರರಲ್ಲಿ ರಾಘವೇಂದ್ರ ಅವರು ಮನವಿ ಮಾಡಿದರು. ಅವರ ಮನವಿಗೆ ನೌಕರರು ಮೊದಲು ಆಕ್ಷೇಪ ವ್ಯಕ್ತಪಡಿಸಿ, ಇಲ್ಲ ಒಂದು ವಾರದೊಳಗೆ ವಜಾ ಮಾಡಿರುವ ಎಲ್ಲ ನೌಕರರನ್ನು ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ನಿಮ್ಮ ಬೇಡಿಕೆಯಂತೆ ಒಂದು ವಾರದೊಳಗಡೆ ಮರು ನೇಮಕಕ್ಕೆ ಚಾಲನೆ ನೀಡಿ ಒಂದು ತಿಂಗಳೊಳಗಾಗಿ ಎಲ್ಲ ನೌಕರರನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ರಾಘವೇಂದ್ರ ಅವರ ಮಾತಿಗೆ ಸ್ಪಂದಿಸಿದ ನೌಕರರು ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಿದರು.
ಇನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ನೂತನವಾಗಿ ನೇಮಕಗೊಂಡಿರುವ ಎಸ್ ಆಂಡ್ ವಿ ಅವರ ಜತೆ ಈ ಬಗ್ಗೆ ಸಚಿವರು ಚರ್ಚೆ ಮಾಡಿದ್ದು, ನೂತನ ಎಸ್ ಆಂಡ್ ವಿ ಅವರು ನೌಕರರ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ನೌಕರರ ಬಹುತೇಕ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ ಎಂಬ ಭರವಸೆ, ವಿಶ್ವಾಸದೊಂದಿಗೆ ನೌಕರರು ಇನ್ನೂ ಕಾಯುತ್ತಿದ್ದಾರೆ.