ಪಿರಿಯಾಪಟ್ಟಣ: ಪ್ರಪಂಚದಲ್ಲಿ ಅತಿ ಹೆಚ್ಚು ತಂಬಾಕು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ ಎಂದು ಕರ್ನಾಟಕ ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಜವರೇಗೌಡ ತಿಳಿಸಿದರು.
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ರೈತ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ತಂಬಾಕು ಬೆಳೆಗಾರರ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ತಂಬಾಕು ಬೆಳೆಗಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಬೆಳೆಗಾರರು ದಿನದ ಮಹತ್ವ ಮತ್ತು ಉದ್ದೇಶವನ್ನು ತಿಳಿಯಬೇಕು. ರಾಜ್ಯದಲ್ಲಿ ಮೈಸೂರು ಪ್ರಾಂತ್ಯದ ನಾಲ್ಕು ತಾಲೂಕುಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನಲ್ಲಿ ಉತ್ಪಾದಿಸುವ ತಂಬಾಕಿಗೆ ತನ್ನದೇ ಆದ ಬೇಡಿಕೆ ಇದೆ ಎಂದರು.
ಇನ್ನು ಈ ಭಾಗದ ರೈತರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢವಾಗಲು ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಇದರ ಪಾತ್ರ ದೊಡ್ಡದಾಗಿದೆ. ಅಲ್ಲದೇ ತಂಬಾಕು ಬಿಟ್ಟು ಬೇರೆ ಯಾವುದೇ ಬೆಳೆಗೆ ದೇಶದಲ್ಲಿ ಈ ರೀತಿಯ ವ್ಯವಸ್ಥಿತವಾದ ಮಾರುಕಟ್ಟೆ ಸೌಲಭ್ಯಗಳಿಲ್ಲ. ಹಾಗಾಗಿ ಬೇರೆ ಯಾವುದೇ ಬೆಳೆ ಕೈಕೊಟ್ಟರು ತಂಬಾಕು ಸಂಜಿವೀನಿಯಂತೆ ರೈತರನ್ನು ಕಾಪಾಡಿಕೊಂಡು ಬಂದಿದೆ ಎಂದರು.
ಬೇರೇ ಬೆಳೆಗಳಿಗೆ ಹೋಲಿಸಿದರೆ ತಂಬಾಕು ನಮ್ಮ ಭಾಗದ ರೈತರಿಗೆ ಒಂದು ಲಾಭದಾಯಕ ಬೆಳೆಯಾಗಿದ್ದು, ಮಳೆಯಾಶ್ರಿತ ಬೆಳೆಯಾಗಿರುವುದರಿಂದ ನಾವು ಎಲ್ಲಾ ರೀತಿಯ ಹವಾಮಾನ ವಿಪರೀತ್ಯಗಳನ್ನು ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸಿ ಬೆಳೆಯನ್ನು ಬೆಳೆಯುತ್ತಿದ್ದೇವೆ ಎಂದು ತಿಳಿಸಿದರು.
ತಂಬಾಕು ಮಂಡಳಿ ಹಾಗೂ ಕೇಂದ್ರ ತಂಬಾಕು ಸಂಶೋಧನಾ ಸಂಸ್ಥೆ ಶಿಫಾರಸು ಮಾಡಿದ ಸುಸ್ಥಿರ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ತಂಬಾಕನ್ನು ಬೆಳೆಯಬೇಕು. ಸರಿಯಾದ ಸಮಯಕ್ಕೆ ಕುಡಿ ಮತ್ತು ಕಂಕುಳಕುಡಿ ನಿರ್ವಹಣೆ ಮಾಡಿ ಹಾಕುವುದು ಮತ್ತು ಸರಿಯಾದ ಸಮಯಕ್ಕೆ ಎಲೆಗಳನ್ನು ಕಟಾವು ಮಾಡಿ ಹದಮಾಡುವುದರಿಂದ ನಾವು ಉತ್ತಮ ಗುಣಮಟ್ಟದ ತಂಬಾಕನ್ನು ಬೆಳೆಯಬಹುದು ಎಂದರು.
ಆರ್.ಟಿ.ಸತೀಶ್ ಮಾತನಾಡಿ, ಕೆಲವು ರೈತರು ನಿಗದಿಪಡಿಸಿದ ಖೋಟಕಿಂತಲೂ ಹೆಚ್ಚು ಹೊಗೆಸೊಪ್ಪನ್ನು ಬೆಳೆಯುತ್ತಿದ್ದು ಇದನ್ನು ಮನಗಂಡ ಈ ಭಾಗದ ಸಂಸದರು ಕೇಂದ್ರ ವಾಣಿಜ್ಯ ಮಂತ್ರಿಗಳು ಮತ್ತು ತಂಬಾಕು ಮಂಡಳಿಯ ಜೊತೆಗೆ ಚರ್ಚಿಸಿ ಕಳೆದ ವರ್ಷ ಶೇ. 15 ರಿಂದ ಶೇ.10 ಕ್ಕೆ ಕಡಿತಗೊಳಿಸಿದ್ದರು ಎಂದು ತಿಳಿಸಿದರು.
ರೈತ ಮುಖಂಡ ಹಿಟ್ನಳ್ಳಿ ಪರಮೇಶ್ ಮಾತನಾಡಿ, ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, 45.7 ದಶಲಕ್ಷ ಜನರ ಜೀವನಾಡಿಯಾಗಿದೆ. ದೇಶದ ಬೊಕ್ಕಸಕ್ಕೆ ತಂಬಾಕು ಉತ್ಪನ್ನಗಳು ಗಣನೀಯ ಪ್ರಮಾಣದಲ್ಲಿ ತೆರಿಗೆಯನ್ನು ನೀಡುತ್ತಿವೆ ಎಂದರು.
ವಾರ್ಷಿಕವಾಗಿ ಈ ಉತ್ಪನ್ನಗಳಿಂದ ಬೊಕ್ಕಸಕ್ಕೆ 44,000 ಕೋಟಿ ರೂ. ತೆರಿಗೆ ಸಂದಾಯವಾಗುತ್ತಿದೆ. ಅಲ್ಲದೆ, ತಂಬಾಕು ಉತ್ಪನ್ನಗಳ ರಫ್ತಿನಿಂದಾಗಿ ವಿದೇಶಿ ವಿನಿಮಯದ ರೂಪದಲ್ಲಿ 6 ಸಾವಿರ ಕೋಟಿ ರೂ. ಕೊಡುಗೆ ನೀಡಲಾಗುತ್ತಿದೆ ಎಂದು ಹೇಳಿದರು.
ತಂಬಾಕು ಬೆಳೆಗಾರರು ಸಂಕಷ್ಟದಲ್ಲಿರುವಾಗ ಕಂಪನಿಯವರು ರೈತರ ಕೈ ಹಿಡಿಯಬೇಕು. ತಂಬಾಕು ಬೆಳೆಗಾರರಿಂದ ಕಂಪನಿಗಳಿಗೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅಪಾರ ಪ್ರಮಾಣದಲ್ಲಿ ಆದಾಯಗಳಿಸಿದೆ. ಆದ್ದರಿಂದ ಸಂಕಷ್ಟಕ್ಕೆ ಸಿಲುಕುವ ತಂಬಾಕು ಬೆಳೆಗಾರರಿಗೆ ಕಂಪನಿಗಳು ನೆರವಾಗಬೇಕು ಎಂದರು.
ಹೊಗೆ ಸೊಪ್ಪಿಗೆ ಮಹತ್ವ ತಂದುಕೊಟ್ಟಿದ್ದು ತಂಬಾಕು ಮಂಡಳಿ ಇದು ರೈತ ಮತ್ತು ಮಾರುಕಟ್ಟೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ಇದರಿಂದ ರೈತರಿಗೆ ಇನ್ನು ಹೆಚ್ಚಿನ ಲಾಭ ದೊರೆಯಬೇಕು ಎಂದರು.
ತಂಬಾಕು ಹರಾಜು ಅಧೀಕ್ಷಕ ಪ್ರಭಾಕರ್, ತಂಬಾಕು ಬೆಳೆಗಾರರ ಸಂಘದ ಕಾರ್ಯದರ್ಶಿ ವಿಕ್ರಂ ರಾಜ್ ಅರಸ್, ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಚ್.ಸಿ.ವೀರಭದ್ರ, ರೈತ ಮುಖಂಡರಾದ ಎಚ್.ಬಿ.ಶಿವರುದ್ರ, ಶೆಟ್ಟಿಹಳ್ಳಿ ರಾಜಶೇಖರ್, ಚಂದ್ರೇಗೌಡ, ಚೌತಿ ಶಂಕರ್, ಪಟೇಲ್ ಶ್ರೀನಿವಾಸ್, ರಾಜಶೇಖರ್, ಮಹೇಂದ್ರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ತಂಬಾಕು ಬೆಳೆಗಾರರು ಇದ್ದರು.