ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇಂದು ಬೆಳಗ್ಗೆ ಮನೆಯಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿತ್ತು. ಆಗಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಶಿವರಾಜ್ಕುಮಾರ್ ಅವರ ಮಗಳು ಆಸ್ಪತ್ರೆಗೆ ಈಗಾಗಲೇ ಭೇಟಿ ಕೊಟ್ಟಿದ್ದರು. ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇನ್ನು ವಿಷಯ ಬಹಿರಂಗವಾಗುತ್ತಿದ್ದಂತೆಯೇ ಆಸ್ಪತ್ರೆಯ ಬಳಿ ಅಭಿಮಾನಿಗಳು ಗುಂಪು ಸೇರುತ್ತಿದ್ದಾರೆ. ಜತೆಗೆ ಪೊಲೀಸರು ಸಹ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಬೆಳಗ್ಗೆ ಅವರು ವ್ಯಾಯಾಮ ಮಾಡುವಾಗ ಕುಸಿದು ಬಿದ್ದ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಇನ್ನು ವಿಕ್ರಂ ಆಸ್ಪತ್ರೆಯ ಬಳಿ ರಾಜ್ ಕುಟುಂಬದವರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ನಟ ಯಶ್ ಸಹ ಈಗ ಆಸ್ಪತ್ರೆಗೆ ಬಂದಿದ್ದು, ಪುನೀತ್ ಅವರ ಆರೋಗ್ಯದ ಕುರಿತಾಗಿ ವೈದ್ಯರ ಬಳಿ ವಿಚಾರಿಸಿದರು.
ಪುನೀತ್ ರಾಜ್ಕುಮಾರ್ ಅವರ ಮನೆ ಹಾಗೂ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಭಿಮಾನಿಗಳು ಬರುವ ಸಾಧ್ಯತೆ ಇರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪುನೀತ್ ರಾಜ್ಕುಮಾರ್ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂ ವಿಷಯ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು, ನಿರ್ದೇಶಕರು, ನಟ-ನಟಿಯರು ಹಾಗೂ ನಿರ್ಮಾಪಕರು ಆಸ್ಪತ್ರೆಗೆ ಬರುತ್ತಿದ್ದಾರೆ. ನಟ ಶ್ರೀಮುರಳಿ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಆಸ್ಪತ್ರೆಗೆ ಬಂದಿದ್ದರು.
ಇನ್ನು ಪುನೀತ್ ರಾಜ್ಕುಮಾರ್ ಅವರು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿವಹಿಸುತ್ತಿದ್ದ ವ್ಯಕ್ತಿಯಾಗಿದ್ದು, ಅವರ ನಿತ್ಯ ತಪ್ಪದೆ ವ್ಯಾಯಾಮ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಕಿಲೋ ಮೀಡರ್ ಗಟ್ಟಲೆ ಸೈಕ್ಲಿಂಗ್ ಸಹ ಮಾಡುತ್ತಿದ್ದರು. ಇಂತಹ ವ್ಯಕ್ತಿಗೆ ಹೃದಯಾಘಾತವಾಗಿದೆ ಎಂದರೆ ನಂಬಲು ಯಾರಿಗೂ ಸಾಧ್ಯವಿಲ್ಲ. ಇನ್ನು ನಟನ ಆರೋಗ್ಯದ ಬಗ್ಗೆ ವಿದೇಶದಲ್ಲಿರುವ ಮಗಳಿಗೆ ಮಾಹಿತಿ ನೀಡಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿತ್ತು. ಇನ್ನು ಅವರ ಬಹುನಿರೀಕ್ಷಿತ ಸಿನಿಮಾ ಜೇಮ್ಸ್ ಚಿತ್ರೀಕರಣದ ಹಂತದಲ್ಲಿತ್ತು. ಇದರ ಜೊತೆಗೆ ದ್ವಿತ್ವ ಸಿನಿಮಾ ಸಹ ಇತ್ತೀಚೆಗಷ್ಟೆ ಪ್ರಕಟವಾಗಿತ್ತು. ಹೊಂಬಾಳೆ ಫಿಲಂಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಲೂಸಿಯಾ ಪವನ್ ಕುಮಾರ್ ಇದರ ನಿರ್ದೇಶನ ಮಾಡುತ್ತಿದ್ದಾರೆ.