ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.
46 ವರ್ಷದ ನಟನಿಗೆ ಹೃದಯಾಘಾತವಾಗಿ ಇಂದು (ಅ.29) ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಬುಧವಾರವಷ್ಟೇ ತಮ್ಮ ಸಹೋದರನ ಸಿನಿಮಾಗೆ ವಿಶ್ ಮಾಡಿ, ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿದ್ದರು, ಇದೇ ಪವರ್ ಸ್ಟಾರ್ ಅವರ ಕೊನೆಯ ಮಾತಾಗಿತ್ತು.
ಬುಧವಾರ ಸಹೋದರ ಶಿವರಾಜ್ ಕುಮಾರ್ ಅವರ ಭಜರಂಗಿ- 2 ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರಮವಿತ್ತು. ಈ ವೇಳೆ ಶಿವಣ್ಣ, ಯಶ್ ಹಾಗೂ ಅಪ್ಪು ವೇದಿಕೆಯ ಮೇಲೆ ಸಖತ್ ಸ್ಟೆಪ್ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದರು. ಆದರೆ ಅದೇ ಪುನೀತ್ ಅವರದ್ದು ಕೊನೆಯ ನೃತ್ಯ ಹಾಗೂ ಮಾತಾಗುತ್ತೆ ಅಂತ ಯಾರೂ ಊಹಿಸಿರಲಿಲ್ಲ.
ಅಂದು ವೇದಿಕೆಯ ಮೇಲೆ ಮಾತನಾಡಿದ್ದ ‘ಯುವರತ್ನ’, ಎರಡನೇಯ ಲಾಕ್ ಡೌನ್ ಬಳಿಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಸಿನಿಮಾಗಳು ಒಳ್ಳೆಯ ಓಪನಿಂಗ್ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ತೆಗೆದುಕೊಳ್ಳುತ್ತಿವೆ. ಅದೇ ರೀತಿ ಇಂದು ಭಜರಂಗಿ-2 ಸಿನಿಮಾದ ಪ್ರಿ-ರಿಲೀಸ್ ಆಗುತ್ತಿದ್ದು, 29ರಂದು(ಇಂದು) ತೆರೆ ಕಾಣುತ್ತಿದೆ ಎಂದಿದ್ದರು.
ಈ ಸಿನಿಮಾ 2019ರಲ್ಲಿ ಶುರುವಾಗಿದೆ. ಲಾಕ್ ಡೌನ್ ನಿಂದಾಗಿ ಮುಂದಕ್ಕೆ ಶಿಫ್ಟ್ ಆಗುತ್ತಾ ಬಂತು. ನಮ್ಮ ಎಡಿಟಿಂಗ್ ರೂಮಿನಲ್ಲಿಯೇ ಮೊದಲನೇ ಲಾಕ್ ಡೌನ್ ಮುಗಿದು ಎರಡನೇ ಲಾಕ್ ಡೌನ್ ಮುಗಿದು 3 ತಿಂಗಳ ಕಾಲನೂ ಕೆಲಸ ನಡೆಯುತ್ತಾನೇ ಇತ್ತು. ಚಿತ್ರದಲ್ಲಿ ಶಿವಣ್ಣ, ಶೃತಿ ಮೇಡಂ ಹಾಗೂ ಭಾವನಾ ಹೀಗೆ ಎಲ್ಲರೂ ಅದ್ಭುತವಾಗಿ ಹಾಗೂ ತುಂಬಾ ವಿಭಿನ್ನವಾಗಿ ಕಾಣಿಸುತ್ತಾ ಇದ್ದರು. ಒಳ್ಳೆಯ ಪ್ರೊಡಕ್ಷನ್ ಕ್ವಾಲಿಟಿ ಇದೆ ಎಂದು ಅಪ್ಪು, ಜಯಣ್ಣ ಹಾಗೂ ಬೋಗಣ್ಣ ಅವರಿಗೆ ಅಪ್ಪು ಧನ್ಯವಾದ ಸಲ್ಲಿಸಿದ್ದರು.
ತುಂಬಾ ಆಸಕ್ತಿಯಿಂದ ಸಿನಿಮಾ ಮಾಡಿದ್ದಾರೆ. ಸಿನಿಮಾ ಇನ್ನೇನು ಅ.29(ಇಂದು) ತೆರೆಕಾಣುತ್ತಿದೆ. ಸಿನಿಮಾ ಯಶಸ್ಸು ಕಾಣಲಿ, ದೇವರು ಇವರು ಎಲ್ಲರಿಗೂ ಒಳ್ಳೆಯದು ಮಾಡಲಿ. ವಿಶ್ ಶಿವಣ್ಣ ಆಲ್ ದಿ ಬೆಸ್ಟ್. ನಿರ್ದೇಶಕ ಹರ್ಷ, ಜಯಣ್ಣ ಬೋಗಣ್ಣ, ಸಿನಿಮಾದ ತಾಂತ್ರಿಕ ಸಲಹೆಗಾರರಾದ ಹರ್ಷ, ಸ್ವಾಮಿ, ಎಡಿಟರ್ ದೀಪು, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದ್ದರು.
ನಿನ್ನೆ ರಾತ್ರಿಯೇ ಅಪ್ಪುಗೆ ಲಘು ಹೃದಂಯಾಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಎಂದಿನಂತೆ ಇಂದು ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಮನೆ ಹುಡುಗ ಏಕಾಏಕಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಸಿಜಿ ಮಾಡಿಸಿ ನಂತರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದು, ಕುಟುಂಬ, ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗವೇ ಕಣ್ಣೀರಾಗಿದೆ.