ಚಾಮರಾಜನಗರ: ತನ್ನ ಅಚ್ಚುಮೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ನಿಧನ ಸುದ್ದಿ ಕೇಳಿ ಆಘಾತಗೊಂಡ ಅಭಿಮಾನಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಶುಕ್ರವಾರ ನಡೆದಿದೆ.
ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ (30) ಮೃತರು. ನಿನ್ನೆ ಬೆಳಗ್ಗೆ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮುನಿಯಪ್ಪ ಆಘಾತಗೊಂಡಿದ್ದರು.
ಅಪ್ಪು ಆರೋಗ್ಯ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುನಿಯಪ್ಪ ಕಣ್ಣೀರು ಹಾಕುತ್ತಾ ಕುಸಿದರು. ಅತ್ತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆ ಮುನಿಯಪ್ಪಗೆ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಸಾವನ್ನಪ್ಪಿದ್ದಾರೆ.
7 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮುನಿಯಪ್ಪ, ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ತನ್ನ ಗ್ರಾಮವಾದ ಮರೂರಿಗೆ ವಾಪಸ್ಆಗಿದ್ದರು.
ಪುನೀತ್ ಅವರ ಪ್ರತಿಯೊಂದು ಸಿನಿಮಾವನ್ನು ತಪ್ಪದೇ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿದ್ದರು. ಮುನಿಯಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.