ನಾಸಿಕ್: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (MSRTC) ಅಹ್ಮದ್‌ನಗರ ವಿಭಾಗದ ಶೇವಗಾಂವ್ ಘಟಕದ ಚಾಲಕ ಘಟಕದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಚಾಲಕ ದಿಲೀಪ್ ಕಾಕ್ಡೆ (56) ಅವರ ಮೃತದೇಹ ಶೇವಗಾಂವ್ ಡಿಪೋನಲ್ಲೇ ಪತ್ತೆಯಾಗಿದೆ.
ಈ ಸಂಬಂಧ ಶೇವಗಾಂವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮುಂಜಾನೆ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಡಿಪೋನಲ್ಲೇ ಎಸ್‌ಟಿ ಬಸ್‌ನ ಕಬ್ಬಿಣದ ಕ್ಯಾರಿಯರ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಕಾಕ್ಡೆ ಮೃತದೇಹವನ್ನು ಇಳಿಸಿದರು. ಈ ವೇಳೆ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಎರಡು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ MSRTC ನೌಕರರಲ್ಲಿ ಕಾಕ್ಡೆ ಕೂಡ ಒಬ್ಬರು. ಎರಡು ದಿನಗಳ ಕಾಲ ಧರಣಿಯಲ್ಲಿ ಪಾಲ್ಗೊಂಡಿದ್ದ ಅವರು ಪ್ರತಿಭಟನೆ ವಾಪಸ್ ಪಡೆದ ನಂತರ ಮನೆಗೆ ತೆರಳಿದ್ದರು.
ಗುರುವಾರ ಸಂಜೆ ತಮ್ಮ ಗ್ರಾಮದ ಮನೆಗೆ ಹೋಗಿ ಮತ್ತೆ ಡ್ಯೂಟಿಗಾಗಿ ಡಿಪೋಗೆ ಬಂದಿದ್ದರು. ಆದರೆ, ಯಾವುದೇ ಡ್ಯೂಟಿ ಕೊಟ್ಟಿರಲಿಲ್ಲ. ಹೀಗಾಗಿ ರಾತ್ರಿ ಡಿಪೋದಲ್ಲೆ ಮಲಗಲು ಡಿಎಂ ಹೇಳಿದ್ದದರು ಎಂದು ತಿಳಿದು ಬಂದಿದೆ.
ಅದರಂತೆ ಕಾಕ್ಡೆ ಡಿಪೋನಲ್ಲೇ ಮಲಗಿದ್ದರು. ಅವರು ಮಲಗಿರುವುದನ್ನು ಒಬ್ಬ ಭದ್ರತಾ ಸಿಬ್ಬಂದಿ ತಡರಾತ್ರಿ 1.30ರಲ್ಲಿ ನೋಡಿಕೊಂಡು ಬಂದಿದ್ದರು. ಆದರೆ ಮತ್ತೆ ಮುಂಜಾನೆ 6 ಗಂಟೆಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಅವರ ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಮೃತ ಚಾಲಕ ಕಾಕ್ಡೆ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.