ನ್ಯೂಡೆಲ್ಲಿ: ಇಲ್ಲಿನ ಕರ್ನಾಟಕ ಭವನ-2ರ ಶರಾವತಿಯಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಭವನದ ನಿವಾಸಿ ಆಯುಕ್ತರೂ ಆದ ಅಮಿತಾ ಪ್ರಸಾದ್ ಭುವನೇಶ್ವರಿ ದೇವಿ ಪೂಜೆ ಮಾಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, 66ನೇ ಕರ್ನಾಟಕ ರಾಜ್ಯೋತ್ಸವ ಶುಭಾಶಯ ಕೋರಿದರು. ಕರ್ನಾಟಕವು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಐತಿಹಾಸಿಕವಾಗಿ ಸಂಪದ್ಭರಿತ ರಾಜ್ಯವಾಗಿದೆ. ಕನ್ನಡದ ಜನ ಪ್ರೀತ್ಯಾದರಗಳಿಗೆ ಹೆಸರುವಾಸಿಯಾಗಿದ್ದು, 36 ವರ್ಷಗಳ ಸುದೀರ್ಘ ಕಾರ್ಯ ನಿರ್ವಹಣೆಯಲ್ಲಿ ಸ್ವಯಂವೇದ್ಯ ಸಂಗತಿಯಾಗಿದೆ.
ಬೀದರದಿಂದ ಚಾಮರಾಜನಗರದವರೆಗೆ ರಾಜ್ಯದ ಜನರ ಭಾಷೆಯ ಶೈಲಿ, ಉಡುಗೆ-ತೊಡುಗೆ, ಆಚಾರ- ವಿಚಾರದಲ್ಲಿ ವೈವಿಧ್ಯಮಯ ಸೊಗಡು ಹೊಂದಿದೆ ಎಂದರು.
ರಕ್ಷಣಾ ಇಲಾಖೆಯ ನಿರ್ದೇಶಕರಾದ ಅನಂತ ರಾಮ ಅರಳಿ ಅವರು ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಹೆಸರುವಾಸಿ. ಕನ್ನಡ ಅತ್ಯಂತ ಪುರಾತನ, ಸಮೃದ್ಧ ಭಾಷೆಯಾಗಿದ್ದು, ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ.
ಸಹಿಷ್ಣುಗಳಾದ ಕನ್ನಡಿಗರು ಒಳ್ಳೇತನಕ್ಕೆ ಹೆಸರುವಾಸಿಯಾಗಿದ್ದಾರೆ. ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಕನ್ನಡ ಹಾಡುಗಳಲ್ಲಿಯೂ ಸಹ ಕನ್ನಡ ವಿಜೃಂಭಿಸಿದೆ ಎಂದರು. ಕನ್ನಡದ ಭಾಷೆಗಾಗಿ ಶ್ರಮಿಸಬೇಕಾಗಿದ್ದು ನಮ್ಮೆಲ್ಲರ ಕತ್ಯವ್ಯ ಎಂದರು.
ಕಲಬುರಗಿ ಸಂಸದ ಉಮೇಶ ಜಾಧವ ಮಾತನಾಡಿ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಸಂತೋಷ ತಂದಿದೆ. ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಂದು ಮರು ನಾಮಕರಣವಾಯಿತು.
ಹೊರನಾಡಿನಲ್ಲಿದ್ದುಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಹಾಗೂ ಪ್ರೇರಕ. ಮುಂದಿನ ಪೀಳಿಗೆಗೆ ಕನ್ನಡದ ಸಂಸ್ಕೃತಿಯ ಕುರಿತು ತಿಳಿಸಿಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಭವನದ ವಿಶೇಷ ನಿವಾಸಿ ಆಯುಕ್ತರಾದ ವಿಜಯ್ ರಂಜನ್ ಸಿಂಗ್, ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತ ಎಚ್. ಪ್ರಸನ್ನ, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನೀಯರ್ ಎಚ್.ಸಿ.ರಮೇಂದ್ರ ಹಾಗೂ ಕರ್ನಾಟಕ ಭವನದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಕೆಎಸ್ ಆರ್ ಪಿಯ ಎಂಟನೇ ಪಡೆಯ ಆರ್ ಎಸ್ ಐ ಲೋಕೇಶ್ ಪಾಟೀಲ್ ಧ್ವಜ ವಂದನೆ ನೀಡಿದರು. ಕಾರ್ಯಕ್ರಮವನ್ನು ಕರ್ನಾಟಕ ಭವನದ ಉಪ ಸಮನ್ವಯಾಧಿಕಾರಿ ಆರ್ ರೇಣುಕುಮಾರ್ ಅವರು ನಿರ್ವಹಿಸಿ, ವಂದಿಸಿದರು.