ಸಿಂದಗಿ(ವಿಜಯಪುರ): ಸಿಂದಗಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಜಯಭೇರಿ ಬಾರಿಸಿದ್ದಾರೆ.
ಕ್ಷೇತ್ರದ ಉಪ ಚುನಾವಣೆಯ 22 ಸುತ್ತಿನ ಮತ ಎಣಿಕೆಯಲ್ಲಿ ಎಲ್ಲಾ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿಕೊಂಡು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಬಿಜೆಪಿ 93,380 ಮತಗಳನ್ನು ಪಡೆದುಕೊಂಡಿದೆ, ಕಾಂಗ್ರೆಸ್ 62,292 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಜೆಡಿಎಸ್ (ಎಸ್) ಕೇವಲ 4,321 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಜತೆಗೆ ಅದು ಠೇವಣಿ ಕಳೆದುಕೊಂಡಿದೆ. 1,029 ಮಂದಿ ನೋಟಾಕ್ಕೆ ಮತ ನೀಡಿದ್ದಾರೆ. ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.47ರಷ್ಟು ಮತದಾನವಾಗಿತ್ತು.
ಮತ ಎಣಿಕೆಯ ಪ್ರತಿ ಸುತ್ತಿನಲ್ಲಿಯೂ ಭೂಸನೂರ ತಮ್ಮ ನಿಕಟಸ್ಪರ್ಧಿ ಕಾಂಗ್ರೆಸ್ ನ ಅಶೋಕ್ ಮನಗುಳಿಯವರಿಗಿಂತ 2,500 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು. ವಿಜಯಪುರದ ವಡೆಯರ್ ಭವನ ಸೈನಿಕ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.
ರಮೇಶ ಭೂಸನೂರ ಅವರು ಸಿಂದಗಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಒಂದೇ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾದ ಮೊದಲ ರಾಜಕಾರಣಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಭೂಸನೂರ, “ನಾನು 25,000 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ಹೊಂದಿದ್ದೆ. ಆದರೆ ಜನರು ನನ್ನನ್ನು 31,088 ಮತಗಳ ಮುನ್ನಡೆಯೊಂದಿಗೆ ಆಯ್ಕೆ ಮಾಡಿದ್ದಾರೆ. ನನ್ನ ಮತ್ತು ನನ್ನ ಪಕ್ಷದ ಮೇಲೆ ವಿಶ್ವಾಸ ತುಂಬಿದ ಮತದಾರರಿಗೆ ನಾನು ಧನ್ಯವಾದ ಹೇಳುತ್ತೇನೆ.
ಇನ್ನು ನನ್ನ ಗೆಲುವಿಗಾಗಿ ಸಚಿವರಾದ ವಿ.ಸೋಮಣ್ಣ, ಸಿ.ಸಿ. ಪಾಟೀಲ್ ಮತ್ತು ಗೋವಿಂದ್ ಕಾರಜೋಳ ಸೇರಿದಂತೆ ಹಿರಿಯ ನಾಯಕರು ಮೂರು ವಾರಗಳ ಕಾಲ ಕ್ಷೇತ್ರದಲ್ಲಿ ತೀವ್ರ ಪ್ರಚಾರ ನಡೆಸಿದರು ಎಂದು ಹೇಳಿದರು.
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ ಎಂಬ ಅಪಪ್ರಚಾರವನ್ನು ಕಾಂಗ್ರೆಸ್ ಹಬ್ಬಿಸಿತ್ತು. ಅಲ್ಪಸಂಖ್ಯಾತ ಸಮುದಾಯದ ಕನಿಷ್ಠ 4,000 ಜನರು ನನಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ನವರ ಸುಳ್ಳು ಅವರನ್ನೇ ನೆಲಕಚ್ಚಿಸಿದೆ. ಮುಸಲ್ಮಾನರು ಸಹ ಬಿಜೆಪಿಯೊಂದಿಗೆ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಕೇವಲ 4,321 ಮತಗಳನ್ನು ಪಡೆದಿದ್ದು, ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ಸಿಂದಗಿಯ ಜನರು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ಅವರ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ಬಿಜೆಪಿಯ ನೂತನ ಶಾಸಕ ಭೂಸನೂರ ಹೇಳಿದರು.