ಪುಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ) ಮುಷ್ಕರ ನಿರತರನ್ನು ಗುರಿಯಾಗಿಸಿಕೊಂಡು ಅಮಾನತು ಮಾಡುತ್ತಿದೆ. ಚಾಲಕರೊಬ್ಬರು ಅಮಾನತು ಆದೇಶ ನೋಡಿ ಭಯಗೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮೂರ್ಛೆಹೋಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಈ ಘಟನೆ ನಡೆದಿದ್ದು, 33 ವರ್ಷದ ಬಾಪು ಗಡಸಿಂಗ್ ಮಾರುತಿ ಎಂಬ ಚಾಲಕನೆ ಆಸ್ಪತ್ರೆ ಸೇರಿರುವವರು. ಅವರು ಮುಷ್ಕರ ನಿರತ ನೌಕರರ ಭಾಗವಾಗಿದ್ದು, ಶಿವಾಜಿನಗರ ಡಿಪೋದಲ್ಲಿ ಪ್ರತಿಭಟನಾ ನಿತರೊಂದಿಗೆ ಇದ್ದರು. ಅದನ್ನು ಗಮನಿಸಿದ ಅಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮುನ್ನಾ ಮಧ್ಯಾಹ್ನದ ಊಟಕ್ಕೆಂದು ಧನೋರಿಯಲ್ಲಿರುವ ತನ್ನ ಮನೆಗೆ ಹೋಗಿದ್ದ ಚಾಲಕ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮುಷ್ಕರ ನಿರತ ಮತ್ತೊಬ್ಬ ನೌಕರ ಸಂಜಯ್ ಮುಂಢೆ ತಿಳಿಸಿದ್ದಾರೆ.
ಇದುವರೆಗೆ, ರಾಜ್ಯಾದ್ಯಂತ 7,585 ಕ್ಕೂ ಹೆಚ್ಚು ಕಾರ್ಮಿಕರನ್ನು MSRTC ಅಮಾನತುಗೊಳಿಸಿದೆ. ಆದರೂ ನಾವು ಈ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ನಮ್ಮ ನೌಕರರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಲು ರಾಜ್ಯ ಸರ್ಕಾರ ಈ ಅಮಾನತು ಎಂಬ ಅಂತಿಮ ಕಾರ್ಡ್ ಅನ್ನು ಪ್ಲೇ ಮಾಡುತ್ತಿದೆ. ಇದರಿಂದ ಅನೇಕ ನೌಕರರು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗುತ್ತಿದ್ದಾರೆ. ಆದರೂ ನಾವು ಅವರ ಈ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.
ಇನ್ನು ಇಂದಿನ ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇನ್ನೂ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕೆಲಸಕ್ಕೆ ಮರಳುವ ಮೂಲಕ ಶೇ.100 ರಷ್ಟು ಬಸ್‌ಗಳು ರಸ್ತೆಗಿಳಿಯುವ ವಿಶ್ವಾಸವಿದೆ ಎಂದು ಪುಣೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.