ಚಳ್ಳಕೆರೆ: ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳ ಮೊಂಡುತನದ ವಿರುದ್ಧ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ (ನ.29) ಆರಂಭಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ರಾತ್ರಿ ಚಳ್ಳಕೆರೆಯ ತಮ್ಮ ಸಹೋದ್ಯೋಗಿಯ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಪಾದಯಾತ್ರಿಗರು ಮೂರನೇ ದಿನವಾದ ಇಂದು ( ಬುಧವಾರ ಡಿ.1) ಬೆಳಗ್ಗೆ ತಿಂಡಿ ಮುಗಿಸಿ ಚಳ್ಳಕೆರೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ.
ಮಂಗಳವಾರ (ನ.30) ಹಾನಗಲ್‌ಲ್ಲಿ ವಾಸ್ತವ್ಯ ಮಾಡಿದ್ದ ಪಾದಯಾತ್ರೆ ಹೊರಟ ನೌಕರರು ಮುಂಜಾನೆ 5ಗಂಟೆಗೆ ಹಾನಗಲ್‌ನಿಂದ ಮತ್ತೆ ಪಾದಯಾತ್ರೆ ಆರಂಭಿಸಿದರು. ಈ ಮಧ್ಯೆ ಹಾನಗಲ್‌ನಲ್ಲಿ ರಾತ್ರಿ ಉಳಿದುಕೊಳ್ಳಲು ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವ್ಯವಸ್ಥೆ ಮಾಡಿದ್ದರು. ಜತೆಗೆ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟು ಸತ್ಕರಿಸುವ ಮೂಲಕ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.
ಇನ್ನೂ ಅಧಿಕಾರಿಗಳಿಗೆ ಹೆದರಿ ಹಲವು ನೌಕರರು ಪಾದಯಾತ್ರೆ ಮಾಡಲು ಮುಂದಾಗದಿರುವುದು ಅಚ್ಚರಿಗೆ ಕಾರಣವಾಗುತ್ತಿದೆ. ಮೂರನೇ ದಿನವಾದ ಇಂದು ದೊಡ್ಡಯ್ಯ, ನಿಂಗಪ್ಪ, ಸೆಲ್ವಂ ಮತ್ತು ಮಂಜೇಗೌಡ ಈ ನಾಲ್ವರು ಪಾದಯಾತ್ರೆ ಮಾಡುತ್ತಿದ್ದು, ಮಾರ್ಗ ಮಧ್ಯೆ ಬರುವ ಗ್ರಾಮಗಳ ಗ್ರಾಮಸ್ಥರು ಈ ನೌಕರರಿಗೆ ಸಾಥ್ ನೀಡುತ್ತಿದ್ದಾರೆ. ಇದು ನಿಜಕ್ಕೂ ವಿಶೇಷವಾದ ಕಾಳಜಿಯನ್ನು ನೌಕರರ ಬಗ್ಗೆ ಸಾರ್ವಜನಿಕರು ತೋರಿಸುತ್ತಿರುವ ಪರಿಯಾಗಿದೆ ಎಂದೇ ಹೇಳಬಹುದು.
ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾದ ಪಾದಯಾತ್ರೆ ಚಳ್ಳಕೆರೆ – ಹಿರಿಯೂರು ಬೈಪಾಸ್ – ತುಮಕೂರು – ಯಶವಂತಪುರ – ಮೇಖ್ರಿ ವೃತ್ತ – ಪ್ಯಾಲೇಸ್ ಗುಟ್ಟಹಳ್ಳಿ ಮಾರ್ಗವಾಗಿ ಸಾಗಿ ಡಿ.4ರಂದು ವಿಧಾನಸೌಧ ತಲುಪಲಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಮತ್ತು ಬೇಡಿಕೆಗಳ ಮನವಿ ಸಲ್ಲಿಸಲಿದ್ದಾರೆ.
ನಾಲ್ಕು ನಿಗಮಗಳ 1,30 ಲಕ್ಷ ನೌಕರರ ಪರವಾಗಿ ಬಳ್ಳಾರಿ ಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡು ಈಗಾಗಲೇ ಬಳ್ಳಾರಿ, ಹಾನಗಲ್ ಬಿಟ್ಟು ಎರಡನೇ ರಾತ್ರಿ ಚಳ್ಳಕೆರೆಯಲ್ಲಿ ವಾಸ್ತವ್ಯ ಮಾಡಿ ಇಂದು ಬೆಳಗ್ಗೆ ಹಿರಿಯೂರು ಬೈಪಾಸ್ ಮಾರ್ಗವಾಗಿ ಸಾರಿಗೆ ನೌಕರರು ಬರುತ್ತಿದ್ದಾರೆ.
ಈ ಪಾದಯಾತ್ರೆ ಮಾಡುತ್ತಿರುವವರಿಗೆ ಚಳ್ಳಕೆರೆಯಲ್ಲಿ ವಾಸ್ತವ್ಯ ಮಾಡಲು ಕೆಎಸ್‌ಆರ್‌ಟಿಸಿ ಚಾಲಕ ಟಿ.ಎ. ದ್ಯಾವಪ್ಪ ಅವರ ಸಹೋದ್ಯೋಗಿಗಳಿಗೆ ಹೇಳಿ ಎಲ್ಲ ವ್ಯವಸ್ಥೆಯನ್ನು ಮಾಡಿಸಿದ್ದರು. ಇಂದು ಕೂಡ ಬಾಬು ಎಂಬುವರು ವಾಸ್ತವ್ಯ ಮಾಡಲು ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದ್ದಾರೆ.