ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಕಳಪೆ ಟಿಕೆಟ್ ಮಷಿನ್ಗಳ ಬಳಕೆಯಿಂದ ಸಂಸ್ಥೆಯ ನಿರ್ವಾಹಕರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಶಿವಮೊಗ್ಗ- ಸಾಗರ ನಡುವಿನ ಪ್ರಯಾಣಕ್ಕೆ ಸಾರಿಗೆ ಬಸ್ನಲ್ಲಿ 70 ರೂ. ಟಿಕೆಟ್ ದರವಿದೆ. ಆದರೆ ಇಂದು ಪ್ರಯಾಣಿಕರೊಬ್ಬರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಭಟ್ಕಳ ಘಟದ ಬಸ್ ನಿರ್ವಾಹಕರು ಟಿಕೆಟ್ ಕೊಡುವ ವೇಳೆ 1X70 =70. ಮೊತ್ತ 83956.08 ರೂ. ಎಂದು ಬಂದಿದೆ.
ಇದರ ಜತೆಗೆ ಮತ್ತೊಂದು ಟಿಕೆಟ್ನಲ್ಲಿ ಆನಂದಪುರ- ಶಿವಮೊಗ್ಗಕ್ಕೆ 50 ರೂ. ಟಿಕೆಟ್ ದರವಿದೆ. ಆದರೆ ಅದರಲ್ಲಿ ಬಂದಿರುವುದು 1X50 =50. ಮೊತ್ತ 67166.80 ರೂ. ಎಂದು. ಇದನ್ನು ನೋಡಿದ ಪ್ರಯಾಣಿಕರು ಕಕ್ಕಿಬಿಕ್ಕಿಯಾಗಿದ್ದಾರೆ.
ಅಲ್ಲದೆ ನಿರ್ವಾಹಕರು ಕೂಡ ಭಯಗೊಂಡಿದ್ದಾರೆ. ಇಷ್ಟೊಂದು ಮೊತ್ತ ನೀವು ಕಟ್ಟಬೇಕು ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದರೆ ನಾನು ಏನು ಮಾಡುವುದು ಎಂದು ಗಾಬರಿಗೊಂಡಿದ್ದಾರೆ.
ನೋಡಿ ಈ ರೀತಿ ದರ ನಿಗದಿಯಾದರೆ ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗಬಹುದು ಎಂದು ಪ್ರಯಾಣಿಕರು ಕಾಲೆಳೆದಿದ್ದಾರೆ.
ಇನ್ನು ಅಧಿಕಾರಿಗಳು ಕಳಪೆ ಟಿಕೆಟ್ ಮಷಿನುಗಳನ್ನು ಖರೀದಿ ಮಾಡಿರುವುದು. ಆ ಮಷಿನಿನ ಮಾರುಕಟ್ಟೆ ಬೆಲೆಗಿಂತ ಮೂರುಪಟ್ಟು ಹೆಚ್ಚು ಕೊಟ್ಟು ಖರೀದಿಸುವ ಇಂಥ ಮಷಿಗಳು ಕೆಲಸಕ್ಕೆ ಬರುತ್ತವೆಯೇ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಈ ರೀತಿಯ ಮಷಿನುಗಳಿಂದ ನಿರ್ವಾಹಕರು ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವೆ. ಮೊದಲು ಭ್ರಷ್ಟ ಅಧಿಕಾರಿಗಳು ಮತ್ತು ಸಂಸ್ಥೆಗೆ ಬರುವ ಕೆಲ ಭ್ರಷ್ಟ ಜನಪ್ರತಿನಿಧಿಗಳನ್ನು ನಿಯಂತ್ರಿಸಬೇಕು.
ಹೀಗಾಗದರೆ ಸಂಸ್ಥೆಯೂ ಲಾಭದತ್ತ ಸಾಗುತ್ತದೆ. ನೌಕರರಿಗೂ ಉತ್ತಮ ವೇತನ ನೀಡಲು ಸಾದ್ಯವಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಲ್ಲದೆ ಇಂಥ ಮಷಿನ್ಗಳನ್ನು ಖರೀದಿಸುವ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಸಾರ್ವಜನಿಕರ ಹಣ ಪೋಲ್ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.