ಬೆಂಗಳೂರು: ಕೊರೊನಾ ದೇಶದ ಜನರನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡಿದೆ. ಹಾಗೆಯೇ ಸರ್ಕಾರಿ ಸಂಸ್ಥೆಗಳಿಗೂ ಇದು ಭಾರಿ ಹೊಡೆತ ನೀಡಿದ್ದು, ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಇನ್ನಷ್ಟು ಸಿಲುಕುವಂತೆ ಮಾಡಿದೆ. ಹೌದು! ಕೆಎಸ್ಆರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ಸಂಕಷ್ಟದಲ್ಲಿ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಈ ಎಲ್ಲ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಮಾಡುವಂತೆ ಸಾರಿಗೆ ನಿಗಮಗಳ ನೌಕರರ ಬಹುತೇಕ ಎಲ್ಲ ಸಂಘಟನೆಗಳು ಸಲಹೆ ನೀಡಿವೆ.
ಸಂಕಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನಮಾಡಿ , ಒಂದೇನಿಗಮ ರಚಿಸುವಂತೆ. ಸಾರಿಗೆ ನಿಗಮಗಳಪುನರಚನಾ ಸಮಿತಿಗೆ ಸಾರಿಗೆ ನೌಕರರ ಸಂಘಟನೆಗಳು ಒಕ್ಕೋರಲಿನಿಂದ ಸಲಹೆ ಮಾಡಿವೆ.
ಇನ್ನು ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಬಸ್‌ಗಳ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ , ನೌಕರರ ವೇತನಕ್ಕೂ ಹಣವಿಲ್ಲದೇ ನಿಗಮಗಳು ಪರದಾಡುತ್ತಿದ್ದು, 4500 ಕೋಟಿ ರೂ. ನಷ್ಟವಾಗಿದೆ. 1997 ರಿಂದ ಇಲ್ಲಿಯವರೆಗೂ ಪಿಎಫ್, ಎಲ್ ಐಸಿ, ನಿವೃತ್ತಿ ವೇತನ ಸೇರಿ 1,700 ಕೋಟಿ ರೂ.ಗಳನ್ನು ನೌಕರರಿಗೆ ಕೊಡಲಾಗದೆ ಬಾಕಿ ಉಳಿಸಿಕೊಂಡಿವೆ.
ಹೀಗಾಗಿ ನಾಲ್ಕು ನಿಗಮಗಳನ್ನೂ ವಿಲೀನಗೊಳಿಸಿ, ಆಡಳಿತ ವಿಭಾಗದ ನಷ್ಟ ಸೇರಿದಂತೆ ಹಲವು ನಷ್ಟಗಳನ್ನು ತಪ್ಪಿಸುವಂತೆ ಕಮಿಟಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮರ್ಜ್ ಮಾಡುವಂತೆ ಐಎಎಸ್ ನಿವೃತ್ತ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದ ಒನ್ ಮ್ಯಾನ್ ಕಮಿಟಿಗೆ ಸಲಹೆ ನೀಡಿದ್ದು, ಈ ನಿಗಮಗಳ ಭವಿಷ್ಯ ಇನ್ನೂ ನಿರ್ಧಾರವಾಗಬೇಕಿದೆ.
1961 ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ 1997 ರಲ್ಲಿ ನಾಲ್ಕುನಿಗಮಗಳಾಗಿ ವಿಂಗಡಣೆಯಾಗಿತ್ತು, ಆದರೆ 1997 ರಲ್ಲೂ ಪ್ರತ್ಯೇಕ ನಿಗಮ ಬೇಡ ಎಂದು ಫೆಡರೇಶನ್ ಸಲಹೆ ನೀಡಿತ್ತು, ಆದರೆ ವಿಂಗಡನೆ ಮಾಡಲಾಗಿತ್ತು. ಸದ್ಯ ಆರ್ಥಿಕ ಪರಿಸ್ಥಿತಿಯಿಂದ ದಿವಾಳಿಯಾಗಿರುವ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಿ ನೌಕರರ ಹಾಗೂ ಸಾರಿಗೆ ನಿಗಮಗಳ ಅಭಿವೃದ್ಧಿ ಪಡಿಸಬೇಕೆಂಬುದು ನೌಕರರ ಒತ್ತಾಯವಾಗಿದೆ.
2020-21ರ ಆದಾಯ, ನಷ್ಟದ ಮಾಹಿತಿ ಇಲ್ಲಿದೆ: 2020-21ರಲ್ಲಿ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಹೆಚ್ಚು ನಷ್ಟವನ್ನು ಅನುಭವಿಸಿವೆ. ಈ ಬಾರಿ ಬರೋಬ್ಬರಿ 1221.58 ಕೋಟಿ ರೂ. ನಷ್ಟವಾಗಿದ್ದು, ನಾಲ್ಕು ನಿಗಮಗಳಿಗೆ ಬಂದ ಆದಾಯ ಕೇವಲ 6254.40 ಕೋಟಿ ಎಂದು ಇಲಾಖೆ ಮಾಹಿತಿ ನೀಡಿದೆ. 2020-21ರಲ್ಲಿ ಇಂಧನ ವೆಚ್ಚ 2001.51 ಕೋಟಿ ರೂ. ಹಾಗೂ ಸಿಬ್ಬಂದಿ ವೆಚ್ಚ ಸುಮಾರು 4042 ಕೋಟಿ ರೂ ಆಗಿದ್ದು, ಹೆಚ್ಚು ನಷ್ಟ ಅನುಭವಿಸುತ್ತಿರುವ ನಿಗಮಗಳನ್ನು ಒಟ್ಟುಗೂಡಿಸುವುದು ಅನಿವಾರ್ಯವಾಗಿದೆ ಎನ್ನಲಾಗುತ್ತಿದೆ.
ಕೆಎಸ್ಆರ್ಟಿಸಿಯ ಆದಾಯ ವೆಚ್ಚ ನಷ್ಟದ ಮಾಹಿತಿ: ಒಟ್ಟು ವೆಚ್ಚ- 2667.59 ಕೋಟಿ ರೂ., ಒಟ್ಟು ಆದಾಯ- 2239 ಕೋಟಿ ರೂ., ನಷ್ಟ- 428.59 ಕೋಟಿ ರೂ., ಇಂಧನ ವೆಚ್ಚ- 774.39 ಕೋಟಿ ರೂ. ಸಿಬ್ಬಂದಿ ವೇತನಕ್ಕೆ- 1359.61ಕೋಟಿ ರೂಪಾಯಿಗಳು.
ಬಿಎಂಟಿಸಿ ಆದಾಯ ವೆಚ್ಚ ನಷ್ಟದ ಮಾಹಿತಿ: ಒಟ್ಟು ವೆಚ್ಚ- 1766.36 ಕೋಟಿ ರೂ., ಒಟ್ಟು ಆದಾಯ- 1463.15 ಕೋಟಿ ರೂ., ನಷ್ಟ- 303.21ಕೋಟಿ ರೂ., ಇಂಧನ ವೆಚ್ಚ- 361.67 ಕೋಟಿ ರೂ. ಸಿಬ್ಬಂದಿ ವೇತನಕ್ಕೆ- 1059.06 ಕೋಟಿ ರೂಪಾಯಿಗಳು.
ಎನ್ಡಬ್ಲ್ಯುಆರ್ಟಿಸಿ ಆದಾಯ ವೆಚ್ಚ ನಷ್ಟದ ಮಾಹಿತಿ: ಒಟ್ಟು ವೆಚ್ಚ- 1597.60ಕೋಟಿ ರೂ., ಒಟ್ಟು ಆದಾಯ- 1293.08ಕೋಟಿ ರೂ., ನಷ್ಟ- 304.52 ಕೋಟಿ ರೂ., ಇಂಧನ ವೆಚ್ಚ- 453.26 ಕೋಟಿ ರೂ. ಸಿಬ್ಬಂದಿ ವೇತನಕ್ಕೆ- 862.30 ಕೋಟಿ ರೂಪಾಯಿಗಳು.
ಎನ್ಈಆರ್ಟಿಸಿ ಆದಾಯ ವೆಚ್ಚ ನಷ್ಟದ ಮಾಹಿತಿ: ಒಟ್ಟು ವೆಚ್ಚ- 1444.43 ಕೋಟಿ ರೂ., ಒಟ್ಟು ಆದಾಯ- 1259.17 ಕೋಟಿ ರೂ., ನಷ್ಟ- 185.26 ಕೋಟಿ ರೂ., ಇಂಧನ ವೆಚ್ಚ- 412.19 ಕೋಟಿ ರೂ. ಸಿಬ್ಬಂದಿ ವೆತನಕ್ಕೆ- 761.84 ಕೋಟಿ ರೂಪಾಯಿಗಳು.