ಹೈದರಾಬಾದ್: ಪ್ರವಾದಿ ಮಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ರಾಜಾಸಿಂಗ್ (ಬಿಜೆಪಿಯಿಂದ ಅಮಾನತು ಗೊಂಡಿರುವ ಶಾಸಕ) ಅವರನ್ನು ಬಿಡುಗಡೆ ಮಾಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಜಾಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅದಕ್ಕೆ ಹೈದರಾಬಾದ್ನ ಹಳೆ ನಗರ ಪ್ರದೇಶಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ಭಾರಿ ಪ್ರತಿಭಟನೆಗಳು ನಡೆದಿವೆ.
ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಈ ಮೂಲಕ ರಾಜಾಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ತಡರಾತ್ರಿ ಹೈದರಾಬಾದ್ನ ಕೆಲ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಚಾರ್ಮಿನಾರ್ಸೇರಿದಂತೆ ಹೈದರಾಬಾದ್ನ ಹಳೆಯ ನಗರ ಪ್ರದೇಶದ ಹಲವು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.
ಪ್ರವಾದಿ ಕುರಿತು ಅವಹೇಳನ ಹೇಳಿಕೆ ನೀಡಿದ ಆರೋಪದಡಿ ರಾಜಾಸಿಂಗ್ ಅವರಿಗೆ ನೋಟಿಸ್ ನೀಡದೆ ಪೊಲೀಸರು ಬಂಧಿಸಿದ್ದರು. ಇದರಿಂದ ಕಾನೂನು ಸೂಕ್ತವಾಗಿ ಪರಿಪಾಲನೆಯಾಗಿಲ್ಲ ಎಂದು ಸಿಂಗ್ ಅವರ ವಕೀಲರು ಸ್ಥಳೀಯ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ಹಾಗಾಗಿ, ಸಿಂಗ್ ಅವರ ಬಿಡುಗಡೆಗೆ ಕೋರ್ಟ್ ಆದೇಶ ನೀಡಿತ್ತು.
ಆದರೆ, ಹೈದರಾಬಾದ್ ನಗರ ಪೊಲೀಸ್ ಠಾಣೆಯಲ್ಲದೇ ಸಿಂಗ್ ಅವರ ವಿರುದ್ಧ ವಿವಿಧ ಠಾಣೆಗಳಲ್ಲೂ ದೂರುಗಳು ದಾಖಲಾಗಿವೆ. ಆದರೂ ಬಿಡುಗಡೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಮರು ರಾಜಾಸಿಂಗ್ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.