ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಅದರಂತೆ ಸೋಮವಾರ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ಒತ್ತುವರಿಗಳನ್ನು ತೆರವುಗೊಳಿದ್ದು, ಇಂದು ಮುಂಜಾನೆಯೂ ಕಾರ್ಯಚರಣೆ ಮುಂದುವರಿಸಿದೆ.
ಅದರಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಚೆಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್ ಹಾಗೂ ಬಸವನಪುರ ವಾರ್ಡ್ ನ ಎಸ್.ಆರ್. ಲೇಔಟ್ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ಭೂಮಾಪಕರು ಗುರುತಿಸಿದಂತಹ ಒತ್ತುವರಿ ಪ್ರದೇಶವನ್ನು ಪಾಲಿಕೆಯ ಅಧಿಕಾರಿಗಳು, ಮಾರ್ಷಲ್‌ಗಳ ತಂಡವು ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಹದೇವಪುರ ವಲಯದಲ್ಲಿ ಚಿನ್ನಪ್ಪನಹಳ್ಳಿಯಿಂದ ಮುನ್ನೇಕೊಳಾಳ ಕೆರೆಯ ನಡುವೆ ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಸಾಯಿ ಕಣ್ಣಿನ ಆಸ್ಪತ್ರೆಯ ಕಾಂಪೌಂಡ್ ಗೋಡೆ, ರಾಘಂವ ಸೂಪರ್ ಮಾರ್ಕೆಟ್ ಮುಂಭಾಗದ ಒಳ ಹರಿವಿನ ಕಾಲುವೆ ಸೇರಿದಂತೆ ಅತಿಕ್ರಮಿಸಿದ್ದ 3 ಕಟ್ಟಡಗಳು, 4 ಕಾಂಪೌಂಡ್ ಗೋಡೆ ಹಾಗೂ ರಸ್ತೆಯನ್ನು ತೆರವುಗೊಳಿಸಲಾಗಿದೆ.
ಚೆಲ್ಲಘಟ್ಟ ವ್ಯಾಪ್ತಿಯಲ್ಲಿ ಪ್ರಸ್ಟೀಜ್ ನ ಖಾಲಿ ಜಾಗ, ಕಾಂಪೌಂಡ್ ಗೋಡೆ ಹಾಗೂ ಹೂಡಿ ಬಳಿ ಗೋಪಾಲನ್ ಶಾಲೆ ಹಾಗೂ ಮಹಾವೀರ್ ಅಪಾರ್ಟ್ಮ್ಮೆಂಟ್ ನ ಕಾಂಪೌಂಡ್ ಗೋಡೆ ಸೇರಿದಂತೆ 3 ಕಾಂಪೌಂಡ್ ಗೋಡೆಗಳನ್ನು ತೆರವುಗೊಳಿಸಲಾಗಿದೆ. ಸ್ಪೈಸಿ ಗಾರ್ಡನ್(ಮುನ್ನೆಕೊಳಳು) ಬಳಿ 4 ಕಾಂಪೌಂಡ್ ಗೋಡೆಗಳು ಹಾಗೂ ರಸ್ತೆ ತೆರವುಗೊಳಿಸಲಾಗಿರುತ್ತದೆ.
ಕೆ.ಆರ್.ಪುರದ ಬಸವನಪುರ ವಾರ್ಡ್ ಎಸ್.ಆರ್. ಲೇಔಟ್ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ 77 ಮೀಟರ್ ಉದ್ದ ಹಾಗೂ 2.6 ಮೀಟರ್ ಅಗಲದ ಮಲೆ ನೀರುಗಾಲುವೆಯ ಮೇಲೆ ಸ್ಲ್ಯಾಬ್ ಅಳವಡಿಸಲಾಗಿತ್ತು. ಇಂದು ಪಾಲಿಕೆ ಅಧಿಕಾರಿಗಳು ಎರಡು ಜೆ.ಸಿ.ಬಿ ಗಳ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಮಳೆ ನೀರುಗಾಲವೆ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ಗಳನ್ನು ತೆರವುಗೊಳಿಸಿದ್ದಾರೆ.
ಇಂದು ಒತ್ತುವರಿ ತೆರವುಕಾರ್ಯಚರಣೆ ನಡೆಸಿರುವ ಎಲ್ಲಾ ಕಡೆಗಳಲ್ಲಿಯೂ ಮತ್ತೊಮ್ಮೆ ಒತ್ತುವರಿ ಮಾಡದಂತೆ ಹಾಗೂ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆ ನಿರ್ಮಿಸದಂತೆ ಎಚ್ಚರಿಕೆ ನೀಡಲಾಗಿರುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆ ಮುಂದುವರಿಸಲಿದೆ.