ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಯ ಶೇ.50ರಷ್ಟು ನೌಕರರು ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುವುದು ಬಹಿರಂಗವಾಗಿದೆ.
ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಿಬ್ಬಂದಿಯನ್ನು ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದ್ದು, ಪರೀಕ್ಷೆಗೆ ಒಳಗಾದ ಸಿಬ್ಬಂದಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ನಾನಾ ತೊಂದರೆಗಳು ಇದೆ ಎಂದು ತಿಳಿದು ಬಂದಿದೆ.
ಬಿಎಂಟಿಸಿ ‘ಗ್ರೌಂಡ್ ಸ್ಟಾಫ್ ಹೆಲ್ತ್ ಚೆಕಪ್’ ಮಾಡುವಂತೆ ನಿಗಮವು ಜಯದೇವ ಹೃದ್ರೋಗ ಸಂಸ್ಥೆಯನ್ನು ಮನವಿ ಮಾಡಿತ್ತು. ಅದರಂತೆ ಸಂಸ್ಥೆಯ 800 ರಿಂದ 1,000 ಸಿಬ್ಬಂದಿಗಳನ್ನು ಹೃದಯ ತಪಾಸಣೆಗೆ ಒಳಪಡಿಸಲಾಗಿತ್ತು. ಆ ವೇಳೆ ಶೇ.50ರಷ್ಟು ಮಂದಿ ಹೃದಯ ಸಂಬಂಧಿ ಸಮಸ್ಯೆ ಇಂದ ಬಳಲುತ್ತಿದ್ದಾರೆ ಎಂಬುವುದನ್ನು ಆಸ್ಪತ್ರೆ ವರದಿಗಳು ತಿಳಿಸಿವೆ.
ಬಿಎಂಟಿಸಿ ಸಿಬ್ಬಂದಿಯಲ್ಲಿ 40 ವರ್ಷ ದಾಟಿದ ಪುರುಷರು 45 ವರ್ಷ ದಾಟಿದ ಮಹಿಳಾ ನೌಕರರಲ್ಲಿ ಶೇ.50 ಮಂದಿಗೆ ಬಿಪಿ, ಶುಗರ್ ನಂತಹ ಕಾಯಿಲೆಗಳು ಬರುತ್ತಿವೆ. 25ನೇ ವಯಸ್ಸಿನಲ್ಲಿ ಕೆಲಸಕ್ಕೆ ನೇಮಕವಾಗುವ ಸಿಬ್ಬಂದಿ ಕೇವಲ 5 ವರ್ಷದಲ್ಲೇ ಕಾಯಿಲೆಗಳಿಂದ ಬಳಲುವಂತಾಗುತ್ತಿದೆ ಎಂದು ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಹೈ ಬಿಪಿ, ಹೈ ಕೊಲೆಸ್ಟ್ರಾ ಲ್, ಹೈಪರ್ ಟೆನ್ಶನ್ ಪ್ರಕರಣಗಳು ಹೆಚ್ಚಾಗಿ ಬಿಎಂಟಿಸಿ ಸಿಬ್ಬಂದಿಯನ್ನು ಕಾಡುತ್ತಿವೆ. ಕೆಲವರಿಗಂತೂ ತಮಗೆ ಹೃದಯದ ಸಮಸ್ಯೆ ಇರುವ ಬಗ್ಗೆ ತಿಳಿದೇ ಇಲ್ಲ. ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ನಂತರವೇ ಸಮಸ್ಯೆ ಇರುವುದು ತಿಳಿದುಬಂದಿದೆ ಎಂಬುವುದು ಆತಂಕದ ವಿಚಾರವಾಗಿದೆ.