ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ರಿರುವ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ, ಈ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ಬಗ್ಗೆ ವಿವರ ನೀಡದೆ ಮೌನವಾಗಿದ್ದುಕೊಂಡು ಎಸ್ಸಿ/ ಎಸ್ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಸರ್ಕಾರ ನೇಮಿಸಿದ್ದ ನ್ಯಾ. ನಾಗಮೋಹನ್ ದಾಸ್ ಸಮಿತಿಯ ಶಿಫಾರಸಿನಂತೆ ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಈ ನಿರ್ಧಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಿದ್ದರೆ ಇದು ಬಿಜೆಪಿಯ ಸುಳ್ಳಿನ ಕಂತೆಗೆ ಇನ್ನೊಂದು ಸೇರ್ಪಡೆಯಾಗುತ್ತದೆ ಅಷ್ಟೆ ಎಂದು ತಿವಿದಿದ್ದಾರೆ.
ಎಸ್ ಸಿ/ಎಸ್ ಟಿ ಮೀಸಲಾತಿ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ದೀರ್ಘವಾದುದು ಮಾತ್ರವಲ್ಲ ಆಳುವ ಪಕ್ಷದ ರಾಜಕೀಯ ಇಚ್ಛಾಶಕ್ತಿಯನ್ನೂ ಅವಲಂಬಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಲಿ, ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರಿಗಾಗಲಿ ಕೇಂದ್ರ ಸರ್ಕಾರದಿಂದ ಈ ಕೆಲಸ ಮಾಡಿಸುವ ಶಕ್ತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಎಸ್ಸಿ /ಎಸ್ಟಿ ಮೀಸಲಾತಿಯ ಹೆಚ್ಚಳಕ್ಕಾಗಿ ರಾಜ್ಯದ ವಿಧಾನಮಂಡಲ ನಿರ್ಣಯ ಕೈಗೊಂಡು ಸಂವಿಧಾನದ ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಸಂಸತ್ ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆಯಬೇಕು. ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಮೀಸಲಾತಿ ಹೆಚ್ಚಳ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ (ಇಂದಿರಾ ಸಹಾನಿ ಪ್ರಕರಣದ) ತೀರ್ಪಿನಂತೆ ಒಟ್ಟು ಮೀಸಲಾತಿ 50% ಮೀರುವಂತಿಲ್ಲ. ಮೀಸಲು ಹೆಚ್ಚಳದ ನಿರ್ಧಾರದಿಂದಾಗಿ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.56 ಆಗಲಿದೆ. ಕಾನೂನಿನ ಈ ಬಿಕ್ಕಟ್ಟಿನ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.