ಬೆಂಗಳೂರು: ಬಿಎಂಟಿಸಿ ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿಯ ಮೇಲೆಯೇ ಬಸ್ ಹರಿದಿದ್ದು, ಗಂಭೀರ ಗಾಯಗೊಂಡಿದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಯುನಿವರ್ಸಿಟಿ ಬಳಿ ನಡೆದಿದೆ.
ಮೊದಲ ವರ್ಷದ ಪಿಜಿ ವ್ಯಾಸಂಗ ಮಾಡುತ್ತಿರುವ ಕೋಲಾರ ಮೂಲದ ಶಿಲ್ಪಾ ಎಂಬ ವಿದ್ಯಾರ್ಥಿನಿಯೆ ಗಂಭೀರ ಗಾಯಗೊಂಡವರು. ಶಿಲ್ಪಾ ಬಸ್ ಹತ್ತುತ್ತಿದ್ದಂತೆಯೇ ಚಾಲಕ ಮೂವ್ ಮಾಡಿದ್ದಾನೆ. ಆದರೆ ಗ್ರಿಪ್ ಸಿಗದ ಪರಿಣಾಮ ಆಕೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಹರಿದು ಗಂಭೀರ ಗಾಯಗೊಂಡಿದ್ದಾರೆ.
ಸದ್ಯ ಗಾಯಗೊಂಡ ಶಿಲ್ಪಾ ಅವರನ್ನು ಸ್ಥಳೀಯ ಪೊಲೀಸರು ಹತ್ತಿರದ ಅಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಪೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಇತ್ತ ಅಪಘಾತ ಪ್ರಕರಣ ಸಂಬಂಧ ಯೂನಿವರ್ಸಿಟಿ ಒಳಗೆ ವಾಹನ ಬಿಡದಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಯೂನಿವರ್ಸಿಟಿಯ ಎಲ್ಲ ಗೇಟ್ ಗಳಿಗೂ ಬೀಗ ಹಾಕಿ ಧರಣಿ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್ ತುಕಡಿ ಆಗಮಿಸಿದೆ.
ಅಪಘಾತ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಎಂಟಿಸಿ ಪಶ್ಚಿಮ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಗಾಯಗೊಂಡಿರುವ ವಿದ್ಯಾರ್ಥಿನಿಯ ಎಲ್ಲ ಚಿಕಿತ್ಸಾ ವೆಚ್ಚ ಭರಿಸೋದಾಗಿ ತಿಳಿಸಿದ್ದಾರೆ. ಅಲ್ಲದೆ ಆಕೆಯನ್ನು ಈಗಾಗ್ಲೇ ಪೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಮೂರ್ನಾಲ್ಕು ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಆ ಎಲ್ಲ ಚಿಕಿತ್ಸಾ ವೆಚ್ಚ ಭರಿಸುತ್ತೇವೆ ಎಂದು ಹೇಳಿದ್ದಾರೆ.
ಇತ್ತ ಬಿಬಿಎಂಪಿ, ಅರಣ್ಯ, ಪೊಲೀಸ್ ಇಲಾಖೆ, ವಿದ್ಯಾರ್ಥಿಗಳು ಸೇರಿದಂತೆ ಸಮಿತಿ ರಚನೆ ಮಾಡಲಾಗುವುದು. ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ಸಭೆ ಮಾಡಲಾಗುವುದು. ತಕ್ಷಣಕ್ಕೆ ಸಭೆ ಕರೆದು ಸಾರ್ವಜನಿಕ ವಾಹನ ನಿಷೇಧದ ಬಗ್ಗೆ ತೀರ್ಮಾನ ಮಾಡಲಾಗುವುದು.
ಇನ್ನು ಬಿಎಂಟಿಸಿ ವತಿಯಿಂದ ವಿದ್ಯಾರ್ಥಿನಿ ಚಿಕಿತ್ಸೆ ವೆಚ್ಚ ನೀಡಲಾಗುವುದು. ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಹೆಸರಲ್ಲಿ 5 ಲಕ್ಷ ರೂ. ಫಿಕ್ಸ್ ಡ್ ಠೇವಣಿ ಇಡಲು ನಿರ್ಧಾರ ಮಾಡಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತರು ತಿಳಿಸಿದ್ದಾರೆ.