ಹಾಸನ: ಜಿಲ್ಲೆಯ ಅರಸೀಕೆರೆ ಸಮೀಪದ ಬಾಣಾವರ ಬಳಿ ಕಳೆದ ರಾತ್ರಿ ಹಾಲಿನ ಟ್ಯಾಂಕರ್, ಟಿಟಿ ವಾಹನ, ಕೆಎಸ್ ಆರ್ ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳೂ ಸೇರಿ 9 ಜನರು ಧಾರುಣವಾಗಿ ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ.
ಟಿಟಿ ವಾಹನದಲ್ಲಿದ್ದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಸಾವನ್ನಪ್ಪಿದ್ದಾರೆ. ಒಂದೇ ಗ್ರಾಮದ ನಾಲ್ವರು ಮಕ್ಕಳು, ಮೂವರು ಮಹಿಳೆಯರು, ಓರ್ವ ಪುರುಷ ಸಾವನ್ನಪ್ಪಿದ್ದು, ಮೃತದೇಹಗಳು ಅರಸೀಕೆರೆ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇವೆ.
ಇನ್ನು 12 ಮಂದಿಗೆ ಗಂಭೀರ ಗಾಯಗಳಾಗಿವೆ. 10 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ರೇನ್ ಮೂಲಕ ಟಿಟಿ ವಾಹನವನ್ನು ತೆರುವುಗೊಳಿಸಲಾಯಿತು.
ಮೃತರೆಲ್ಲರೂ ಧರ್ಮಸ್ಥಳ ಸೇರಿ ಕೆಲ ಪುಣ್ಯಕ್ಷೇತ್ರಗಳಿಗೆ ತೆರಳಿ ದೈವದರ್ಶನ ಪಡೆದು ತಮ್ಮ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಇನ್ನು ಕೆಲ ಕಾಲವಷ್ಟೇ ಕ್ರಮಿಸಿದ್ದಿದ್ದರೆ ಮನೆ ಸೇರಿಕೊಳ್ಳುತ್ತಿದ್ದರು. ಆದರೆ, ಅವರೆಲ್ಲರೂ ಅಪಘಾತದಲ್ಲಿ ಸಾವಿಗೆ ತುತ್ತಾಗಿದ್ದಾರೆ.
ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಂಪೋ ಟ್ರಾವೆಲರ್ ವಾಹನದಲ್ಲಿ ಶನಿವಾರ ಧರ್ಮಸ್ಥಳಕ್ಕೆ ತೆರಳಿದ್ದರು. ಮಕ್ಕಳು ಸೇರಿದಂತೆ ಪುರುಷರು ಮುಡಿ ನೀಡಿ ಶ್ರೀ ಮಂಜುನಾಥನ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿ, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಗ್ರಾಮಕ್ಕೆ ವಾಪಸ್ ಆಗುತ್ತಿದ್ದರು.
ಈ ವೇಳೆ ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು. ಶಿವಮೊಗ್ಗ ಕಡೆಯಿಂದ ಅರಸೀಕೆರೆ ಕಡೆಗೆ ಬರುತ್ತಿದ್ದ ಯಮಸ್ವರೂಪಿ ಹಾಲಿನ ಲಾರಿ ಚಾಲಕನಿಗೆ ತಿರುವು ಗೊತ್ತಾಗದೆ ಎರಡು ವಾಹನಗಳು ಬರುತ್ತಿದ್ದ ಕಡೆಗೆ ಏಕಮುಖವಾಗಿ ಸಂಚಾರ ನಡೆಸಿದ್ದಾನೆ.
ಈ ವೇಳೆ ವೇಗವಾಗಿದ್ದ ಟಿಟಿ ವಾಹನ ಹಾಲಿನ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಇದೇ ವಾಹನದ ಹಿಂಬದಿಯಿದ್ದ ಸಾರಿಗೆ ಬಸ್ ಪಲ್ಟಿಯಾಗಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೂರು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ.
ಎಚ್.ಡಿ. ಕುಮಾರಸ್ವಾಮಿ ಸಂತಾಪ: ಮೃತಪಟ್ಟಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ದಿಗ್ಭ್ರಮೆ ಮತ್ತು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಲು ಕ್ರಮ ವಹಿಸಿ, ತಕ್ಷಣ ಸಂಬಂಧಿಕರಿಗೆ ಹಸ್ತಾಂತರ ಮಾಡಬೇಕು. ಗಾಯಾಳುಗಳಿಗೆ ಉಚಿತ, ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರಿಗೆ ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಗಳಿಗೆ ಕರುಣಿಸಲಿ ಹಾಗೂ ಗಾಯಾಳುಗಳೆಲ್ಲರೂ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.