ಮೈಸೂರು : ನನ್ನವರೆಂಬ ಜನ ಎಂದೂ ನನ್ನಪರ ಇದ್ದೇ ಇರುತ್ತಾರೆ. ಕೈಬಿಡುವುದಿಲ್ಲ ಎಂಬ ಬದ್ಧತೆಯೊಂದಿಗೆ ರಾಜಕೀಯ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈಸೂರಿನ ಕೃಷ್ಣರಾಜ ಪಟ್ಟಣದ ಸಾಯಿ ಸಭಾಂಗಣದಲ್ಲಿ ನಡೆದ ಜಾತ್ಯತೀತ ದಳ ಬೆಂಬಲಿತ ಕುರುಬ ಸಮಾಜದ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದರು.
2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದರೆ ಅದಕ್ಕೆ ಎಲ್ಲ ಧರ್ಮ, ಸಮುದಾಯದವರ ಬೆಂಬಲ ಬೇಕು. ಆ ನಿಟ್ಟನಲ್ಲಿ ಈಗ ಜನರೂ ಕೂಡ ಜೆಡಿಎಸ್ ಬೆಂಬಲಿಸಿದರೆ ಭವಿಷ್ಯ ಚೆನ್ನಾಗಿರಲಿದೆ ಎಂಬ ಭಾವನೆ ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನನ್ನ ಕ್ಷೇತ್ರದಲ್ಲಿನ 15 ವರ್ಷದ ನನ್ನ ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರವಿರಲಿ, ನನ್ನ ವೈಯುಕ್ತಿಕ ಕೊಡುಗೆ ನೀಡುವ ವಿಚಾರವಿರಲಿ ಯಾವುದೇ ಸಂದರ್ಭದಲ್ಲಿ ಜಾತಿ ರಾಜಕೀಯ ಮಾಡಿಲ್ಲ ಎಂದ ಶಾಸಕರು, ರಾಜಕಾರಣ ಎಂಬುದು ಬೇರೆಯವರ ಬದುಕು ಕಟ್ಟಿಕೊಡಲು ಮಾಡಬೇಕೆ ವಿನಃ ರಾಜಕಾರಣಿಗಳು ತಮ್ಮ ಬದುಕು ಕಟ್ಟಿಕೊಳ್ಳುವುದಲ್ಲ ಎಂದು ಹೇಳಿದರು.
ನನ್ನ ಅವಧಿಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಇದ್ದ ಕಾರಣ ಸರಕಾರದಿಂದ ಸಮರ್ಪಕವಾಗಿ ಅನುದಾನ ಬಾರದೆ ಕೆಲವೆಡೆ ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ. ಕೆಲವರು ಅದನ್ನೇ ದೊಡ್ಡದು ಮಾಡಿ ನನ್ನನ್ನು ಜಾತಿಗೆ ಸೀಮಿತ ಎಂಬಂತೆ ದೂರುತ್ತಿದ್ದಾರೆ. ಆದರೆ, ನಾನು ಜಾತಿವಾದಿಯೋ ಅಲ್ಲವೋ ಎಂಬುದು ತಾಲೂಕಿನ ಜನತೆಗೆ ತಿಳಿದಿದೆ ಎಂದರು.