ಗದಗ: ಚೌಕಾಸಿ ವೇತನ ಪರಿಷ್ಕರಣೆ ತೊಲಗಿಸಿ ಸಾರಿಗೆ ಕಾರ್ಮಿಕರನ್ನು ಉಳಿಸಿ, ಬೇಕೇಬೇಕು ವೇತನ ಆಯೋಗವೇ ಬೇಕು ಎಂದು ಒತ್ತಾಯಿಸಿ ಇಂದು ನಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಸಾರಿಗೆ ನೌಕರರು ಸೈಕಲ್ ಜಾಥಾಕ್ಕೆ ಸಾಥ್ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಕಳೆದ ಅ.10ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿರುವ ಬೃಹತ್ ಸೈಕಲ್ ಜಾಥಾವು ಇಂದಿಗೆ 30 ದಿನಗಳನ್ನು ಪೂರ್ಣಗೊಳಿಸಿದೆ. ಈ ದಿನ ಗದಗದಲ್ಲಿ ಸಂಚರಿಸುತ್ತಿದ್ದು, ನೌಕರರು ಅತ್ಯಂತ ಉತ್ಸಾಹದಿಂದಲೇ ಭಾಗವಸಿದ್ದಾರೆ.
ಇನ್ನು ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲು ನೂರಾರು ನೌಕರರು ಸಂಗಮಗೊಂಡಿದ್ದು, ಸರ್ಕಾರದ ನಡೆಯನ್ನು ಖಂಡಿಸಿದರು. ಕೊಟ್ಟ ಮಾತು ಈಡೇರಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಗ್ರಿಮೆಂಟ್ ಬಾಳು ಕಾರ್ಮಿಕರ ಕುಟುಂಬ ಬೀದಿಪಾಲು. ನಾಲ್ಕು ವರ್ಷಕ್ಕೊಮ್ಮೆ ಸಾರಿಗೆ ಕಾರ್ಮಿಕರ ಬಲಿ ನಿಲ್ಲಲ್ಲಿ. ಮುಷ್ಕರದ ಸಮಯದಲ್ಲಿ ಆಗಿರುವಂತಹ ಸುಳ್ಳು ಪೊಲೀಸ್ ಕೇಸ್ ಹಿಂಪಡೆಯಬೇಕು.
ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ನೀತಿಯನ್ನು ಕೂಡಲೇ ಕೈ ಬಿಡಬೇಕು. ಕೂಟದ ನಡೆ ಕಾರ್ಮಿಕರ ಏಳಿಗೆಯ ಕಡೆ. ನಡೆಸಿ ನಡೆಸಿ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಿ ಎಂಬುವುದು ಸೇರಿದ ವಿವಿಧ ಸ್ಲೋಗನ್‌ಗಳಿರುವ ಬ್ಯಾನರ್‌ಗಳನ್ನು ಹಿಡಿದು ಕಾರ್ಮಿಕರು ಘೋಷಣೆಗಳನ್ನು ಕೂಗಿದರು.
ಬಳಿಕ ಜಿಲಾಧಿಕಾರಿಗಳಿಗೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಯ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಮುಟ್ಟಿಸಿ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದರು.
ಇನ್ನು ಈಗಾಗಲೇ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿರುವ ಸಾರಿಗೆ ನೌಕರರ ಸೈಕಲ್ ಜಾಥಾ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತಿದೆ. ಆದರೂ ಸರ್ಕಾರ ನೌಕರರ ಕಡೆ ಗಮನ ನೀಡದೆ ಮೌನವಹಿಸಿದ್ದು, ಹಲವು ಕನ್ನಡಪರ ಮತ್ತು ವಿವಿಧ ರಾಜ್ಯ ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಗುತ್ತಿದೆ.
ಈಗಾಗಲೇ 1200ಕ್ಕೂ ಹೆಚ್ಚು ಕಿಮೀ ಕ್ರಮಿಸಿರುವ ಸೈಕಲ್ ಜಾಥಾ ನಿರಂತರವಾಗಿ ತನ್ನ ಸಂಚಾರವನ್ನು ಮುಂದುವರಿಸಿದ್ದು, ಇದು ಮೊದಲನೇ ಹಂತವಾಗಿದ್ದು, ಕೋಲಾರದಲ್ಲಿ ಸಮಾವೇಶಗೊಳ್ಳಲಿದೆ. ಬಳಿಕ ಎರಡನೇ ಬಾರಿಗೆ ಮತ್ತೆ ಜಾಥಾ ಆರಂಭವಾಗಲಿದ್ದು, ಆಗಲು ಸರ್ಕಾರ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ನಡೆ ಹೇಗಿರಲಿದೆ ಎಂಬುವುದನ್ನು ಈಗಲೇ ಹೇಳುವುದಿಲ್ಲ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.