ಬೆಂಗಳೂರು: ಸಾರಿಗೆ ಕಾರ್ಮಿಕರ ಬಾಯಿಗೆ ಮಣ್ಣು ಹಾಕುವ ಚಳವಳಿ. ಸರ್ಕಾರ ತಿರಸ್ಕರಿಸಿರುವ ಬೇಡಿಕೆಗೆ ಕಾರ್ಮಿಕರನ್ನು ದಾರಿ ತಪ್ಪಿಸಿ 1-1-2020 ರಿಂದ ವೇತನ ಹೆಚ್ಚಳವೂ ಇಲ್ಲ. 6 ನೇ ವೇತನವೂ ಇಲ್ಲದಂತೆ ಮಾಡುವ ಹುನ್ನಾರ.
ಇದೇ ಕೂಟದ ಅಧ್ಯಕ್ಷ ಸರ್ಕಾರ ಕೂಟದ ಪರ ಇದೆ ಅನ್ನುತ್ತಾನೆ. ಆಗಾದರೆ ಸೈಕಲ್ ಸರ್ಕಸ್ ಏಕೆ ಎಂದು ಪ್ರಶ್ನಿಸುವ ಮೂಲಕ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೂಟದ ಅಧ್ಯಕ್ಷ ಚಂದ್ರಶೇಖರ್ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸರ್ಕಾರ ಕೂಟದ ಪರ ಇದೆ ಅಂದ ಮೇಲೆ ಸರ್ಕಾರದಿಂದಲೇ 6 ನೇ ವೇತನ ಆಯೋಗಕ್ಕೆ ಸೇರಿಸಬಹುದಲ್ಲ. ಅಥವಾ ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸೇರಿಸಬಹುದಲ್ಲ. ಈ ಬಗ್ಗೆ ಸಾರಿಗೆ ಕಾರ್ಮಿಕರು ಚಿಂತಿಸಬೇಕು. ಸರ್ಕಾರ ಈ ಕೂಟದ ಪರ ಇದ್ದರೆ ಡಿಸೆಂಬರ್ – 2020 ರ ಮುಷ್ಕರದ ವೇಳೆ ಸರ್ಕಾರಿ ನೌಕರರಾಗಿ ಪರಿಗಣಿಸಬಹುದಿತ್ತು. ಆ ಮುಷ್ಕರದ ವೇಳೆ ಒಂದೇ ಬೇಡಿಕೆ ಎಲ್ಲಿಗೆ ಹೋಯಿತು?
ಆನಂತರ 9 ಬೇಡಿಕೆ. 6 ನೇ ವೇತನ ಆಯೋಗದ ಜಾರಿ ಅತೀ ಪ್ರಮುಖವಾದ ಬೇಡಿಕೆ ಯಾಗಿದ್ದರೆ 9 ನೇ ಬೇಡಿಕೆಯಾಗಿ ಏಕೆ ಬಂತು. ಅದರಲ್ಲಿ ಹುಣಸೆ ಕಾಯಿ ಏನಿದೆ? ವೇತನ ಪರಿಷ್ಕರಣೆ ವೇಳೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ನೋಡಿ ಪರಿಶೀಲಿಸಲಾಗುವುದು. ಇದನ್ನೆ ಸರ್ಕಾರ ಬರೆದು ಕೊಟ್ಟಿದೆ ಅಂತ ಕಾರ್ಮಿಕರನ್ನು ನಂಬಿಸಿ ಏಪ್ರಿಲ್ 2021 ರಲ್ಲಿ ಮುಷ್ಕರಕ್ಕೆ ಕರೆ ಕೊಡಲಾಯಿತು.
ಇನ್ನು ಬೂದಿ ಬಾಬಾಗಳ ಮಾತು ನಂಬಿದ ಸಾರಿಗೆ ಕಾರ್ಮಿಕರು 15 ದಿವಸಗಳ ಕಾಲ ಯಶಸ್ವಿ ಮುಷ್ಕರ ನಡೆಸಿದರು. ಈ ವೇಳೆ ಸಾರ್ವಜನಿಕ ಹಿತಾಸಕ್ತಿ ದಾವೆ (PIL) ಹೂಡಿಸಿ ಮುಷ್ಕರ ವಾಪಸ್ಸು ಪಡೆದವರು ಯಾರು?
ಈ ಮುಷ್ಕರದ ವೇಳೇ ಸಾವಿರಾರು ಕಾರ್ಮಿಕರ ವರ್ಗಾವಣೆ- ಡಿಸ್ಮಿಸಲ್- ಲಕ್ಷಾಂತರ ಕಾರ್ಮಿಕರಿಗೆ ನೂರಾರು ಕೋಟಿ ರೂಪಾಯಿ ದಂಡ- ಪೊಲೀಸ್ ಕೇಸುಗಳು ಇನ್ನು ಹತ್ತಾರು ಸಂಕಷ್ಟಗಳು ಯಾರಿಂದ? ಈಗಲು ಸಾವಿರ ನೌಕರರು ಮರು ನೇಮಕ ಆಗಿಲ್ಲ. ಅವರಿಗೆ ಸಂಬಳವಿಲ್ಲ. ಅವರ ಕುಟುಂಬಗಳು ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತ ಲೋಕ ಅದಾಲತ್ ಮೂಲಕ ಹೋದ ಕಾರ್ಮಿಕರಿಗೆ ಒಂದು ವರ್ಷಕ್ಕಿಂತ ಹೆಚ್ಚಿಗೆ ಅವಧಿ ಸಂಬಳವಿಲ್ಲ- ಇಂಕ್ರಿಮೆಂಟ್ ಕಡಿತ- ಪ್ರೊಮೋಷನ್ ಇಲ್ಲ ಮುಂತಾದ ಷರತ್ತುಗಳು ಇದಕ್ಕೆಲ್ಲಾ ಕೂಟದ ಮುಖಂಡರೇ ಕಾರಣ.
ಶಾಸಕರಾದ ಮಹೇಶ್ ಅವರ ಬಾಯಲ್ಲಿ ಕೆಲಸ ಇಲ್ಲ ವೇತನ ಇಲ್ಲ ಅಂತ ವಜಾ ಆದ ಕಾರ್ಮಿಕರ ಕುಟುಂಬಗಳ ಬಾಯಿಗೆ ಮಣ್ಣು ಹಾಕಿದವರು ಯಾರು? ಸಾರಿಗೆ ಕಾರ್ಮಿಕರ ಚಳವಳಿಯ ಇತಿಹಾಸದಲ್ಲಿ ಇಂತಹ ದುರ್ಘಟನೆ ಎಂದು ನಡೆದಿಲ್ಲ.
ಕಾರ್ಮಿಕ ಸಂಘಗಳ ಸಹವಾಸವೇ ಬೇಡ ಅಂತ ಕಾರ್ಮಿಕರ ಮನಸ್ಸಿನಲ್ಲಿ ವಿಷ ಬಿತ್ತಿದವರು ಯಾರು? ಈಗ ಸಂಘಗಳನ್ನು ಏಕೆ ದೂಷಿಸಬೇಕು? ಈಗಲೂ ಸರ್ಕಾರ ನಮ್ಮ ಪರ ಇದೆ ಅಂತ ಹೇಳಿ ಕಾರ್ಮಿಕರನ್ನು ನಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕಾರ್ಮಿಕರು ಎಚ್ಚರ ವಹಿಸಿ- ಸತ್ಯಾಂಶವನ್ನು ಕಾನೂನು ತಜ್ಞರ ಬಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ 1-1-2020 ರಿಂದ ವೇತನ ಪರಿಷ್ಕರಣೆಯೂ ಇಲ್ಲ. ನೀವು ಈಗ ಬರುವ ವೇತನಕ್ಕೆ ದುಡಿಯಬೇಕು. ಬೂದಿ ಬಾಬಾಗಳ ಬಗ್ಗೆ ಎಚ್ಚರಿಕೆ ವಹಿಸಿ. ವಾಸ್ತವತೆಯತ್ತ ಗಮನ ಹರಿಸಿ ಎಂದೂ ಸಲಹೆ ನೀಡಿದ್ದಾರೆ ಮಂಜುನಾಥ್.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರ ಹೇಳಿಕೆ ಸರಿ ಅಥವಾ ತಪ್ಪು ಎಂದು ನೌಕರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳ ಬಯಸಿದರೆ ವಿಜಯಪಥ ವಾಟ್ಸ್‌ಆಪ್ ನಂ: 9480978163ರಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದು.