ಪುತ್ತೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕೆಳಹಂತದ ನ್ಯಾಯಾಲಯದ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಸುಖ್ಯದ ಅಜ್ಜಾವರ ಗ್ರಾಮದ ಕಾಂತಮಂಗಲದ ಕೆ. ಶಶಿಧರ ಎಂಬುವರಿಗೆ ಕೊಡಬೇಕಾದ 5.5 ಲಕ್ಷ ರೂಪಾಯಿ ಸಾಲದ ಹಣದ ಮರುಪಾವತಿಗಾಗಿ ಸುಳ್ಯ ನಗರದ ಕುರುಂಜಿಭಾಗ್ ನಲ್ಲಿರುವ ಸುದೇಶ್ ಸುವರ್ಣ ಅವರು ಚೆಕ್ ಮೂಲಕ ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಸುಳ್ಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ 2018 ರಲ್ಲಿ ದಾಖಲಾಗಿತ್ತು.
ಅದರ ವಿಚಾರಣೆ ನಡೆಸಿದ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯವು ಸುದೇಶ್ ಸುವರ್ಣ ಅವರ ಮೇಲೆ ದಾಖಲಿಸಿದ ಚೆಕ್ ಅಮಾನ್ಯ ಪ್ರಕರಣವು ಸಾಬೀತಾಗಿ ಆರೋಪಿಗೆ ಆರು ತಿಂಗಳ ಸಾದಾ ಸೆರೆಮನೆ ವಾಸ ಹಾಗೂ 5.5 ಲಕ್ಷ ರೂ. ಮೊಬಲಗನ್ನು ಬಡ್ಡಿ ಹಾಗೂ ದಂಡ ಸಹಿತ ಪಾವತಿ ಮಾಡುವಂತೆ ಆದೇಶಿಸಿತ್ತು.
ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಸುದೇಶ್ ಸುವರ್ಣ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಿದ್ದರು. ಪುತ್ತೂರಿನ ಜಿಲ್ಲಾ ನ್ಯಾಯಾಲಯ ಮೇಲ್ಮನವಿ ಕೈಗೆತ್ತುಕೊಂಡು ವಿಚಾರಣೆ ನಡೆಸಿತು. ಈ ವೇಳೆ ಉಭಯ ಪಕ್ಷಕಾರರ ವಾದವನ್ನು ಆಲಿಸಿ, ದಾಖಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತು.
ಅಲ್ಲದೆ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯ ಸುದೇಶ್ ಸುವರ್ಣ ಅವರ ವಿರುದ್ಧ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಈ ಮೂಲಕ ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವುದನ್ನು ಪುರಸ್ಕರಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಸುಳ್ಯ ಹಿರಿಯ ನ್ಯಾಯಾಲಯದಲ್ಲಿ ಹಾಗೂ ಪುತ್ತೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಶಶಿಧರ್ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಪಿ. ಭಾಸ್ಕರ ರಾವ್ ಹಾಗೂ ಅಶ್ವಿನಿ ಕುಮಾರ್ ಪಿ. ವಾದ ಮಂಡಿದ್ದರು.