ತಿ.ನರಸೀಪುರ: ತಾಲೂಕಿನ ಬನ್ನೂರು ಹೋಬಳಿ ಬಸವನಹಳ್ಳಿ ಗ್ರಾಮದ ಹಾಲಿ ಮೈಸೂರು ನಿವಾಸಿ ಹಿರಿಯ ವಕೀಲ ಬಿ.ಎಂ.ಪ್ರಕಾಶ್ (60) ಅವರು ಹೃದಯಾಘಾತದಿಂದ ನಿನ್ನೆ ಸಂಜೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಬಸವನಹಳ್ಳಿ ಗ್ರಾಮದ ಲೇಟ್ ಮೇಷ್ಟ್ರು ಮಾಯಪ್ಪ ಅವರ ಪುತ್ರರಾದ ಮೃತರು ಪತ್ನಿ ಕಮಲಮ್ಮ, ಓರ್ವ ಪುತ್ರ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಹಾಲಿ ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿ ವಾಸವಾಗಿದ್ದ ಮೃತರು, ಸಿದ್ಧಾರ್ಥ ಸ್ಫೋರ್ಟ್ ಕ್ಲಬ್ ಸದಸ್ಯರಾಗಿದ್ದರು. ಈ ಹಿಂದೆ ತಿ.ನರಸೀಪುರ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರು. ಆದರೆ ಪ್ರಸ್ತುತ ಮೈಸೂರಿನ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿದ್ದರು.
ವಕೀಲ ಬಿ.ಎಂ.ಪ್ರಕಾಶ್ ಅವರಿಗೆ ತಿ.ನರಸೀಪುರ ವಕೀಲರ ಸಂಘವು ಶನಿವಾರ ಕಲಾಪದಿಂದ ಹೊರಗುಳಿದು ಶ್ರದ್ಧಾಂಜಲಿ ಸಲ್ಲಿಸಿತು.
ಮೃತರ ಅಂತ್ಯಕ್ರಿಯೆ ಬಸವನಹಳ್ಳಿಯ ಮೃತರ ಸ್ವಂತ ಜಮೀನಿನಲ್ಲಿ ಇಂದು ಮಧ್ಯಾಹ್ನ ನೆರವೇರಿತು.