ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗಳಿಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಮ್ ಆದ್ಮಿ ಪಾರ್ಟಿಯು ಫ್ರೀಡಂ ಪಾರ್ಕ್ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿತು. ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬೆಂಗಳೂರಿನ ಜನರಿಗೆ ಗುಣಮಟ್ಟದ ರಸ್ತೆಗಳು ಸಿಗಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ವರ್ಷಕ್ಕೂ ಅಧಿಕ ಸಮಯದಿಂದ ವಿವಿಧ ರೀತಿಯ ಚಳವಳಿ ಮಾಡುತ್ತಿದೆ. ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ನಾವು ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ.
ಅಲ್ಲದೆ ಗುಂಡಿಗಳ ಸುತ್ತ ರಂಗೋಲಿ ಹಾಕಿ ಪೂಜೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಗುಂಡಿಗಳಿಗೆ ಕಾರಣವಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ 71 ದೂರುಗಳನ್ನು ಸಹ ನೀಡಿದ್ದೇವೆ. ಆದರೆ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಇಂದು ಬೃಹತ್ ಪ್ರತಿಭಟನೆ ಮಾಡಬೇಕಾಗಿ ಬಂದಿದೆ ಎಂದು ಹೇಳಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, ರಸ್ತೆ ಗುಂಡಿ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಇಂದು ಪೊಲೀಸರು ನಮ್ಮನ್ನು ಬಂಧಿಸಿದರೂ, ನಮ್ಮ ಹೋರಾಟ ಇಲ್ಲಿಗೇ ಕೊನೆಯಾಗುವುದಿಲ್ಲ ಇದು ನಿರಂತವಾಗಿ ಮುಂದುವರಿಯುತ್ತದೆ ಎಂದು ತಿಳಿಸಿದರು.
ಇನ್ನು ಹಲವು ರೀತಿಯ ತೆರಿಗೆಗಳನ್ನು ಕಟ್ಟುವ ಜನರಿಗೆ ಉತ್ತಮ ರಸ್ತೆಗಳು ಸಿಗುವಂತೆ ಮಾಡಲು ಆಮ್ ಆದ್ಮಿ ಪಾರ್ಟಿ ಸದಾ ಬದ್ಧವಾಗಿದೆ. ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ಬದಲಾಗಿ ನಿಯತ್ತಿನ ಕೊರತೆಯಿದೆ. ಬಿಬಿಎಂಪಿ ಚುನಾವಣೆ ನಡೆದು ತಮ್ಮಂದಿರು ಬಂದರೆ, ಅಣ್ಣಂದಿರಾದ ತಮಗೆ ಲೂಟಿಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಶಾಸಕರು ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಬೆಂಗಳೂರಿನಲ್ಲಿ ಭ್ರಷ್ಟಾಚಾರವು ಮಿತಿಮೀರಿದ್ದು, 40% ಆಗಿದ್ದ ಕಮಿಷನ್ ಪ್ರಮಾಣವು ಹೆಚ್ಚುತ್ತಾ ಹೋಗುತ್ತಿದೆ. ಶಾಸಕರು ಅಕ್ಷರಶಃ ಲೂಟಿಗೆ ಇಳಿದಿದ್ದಾರೆ. ಇದರ ಪರಿಣಾಮವಾಗಿ ಕರ್ನಾಟಕ ಇತಿಹಾಸವು ಹಿಂದೆಂದೂ ಕಾಣದಷ್ಟು ರಸ್ತೆಗುಂಡಿಗಳನ್ನು ಈಗ ಕಾಣುತ್ತಿದ್ದೇವೆ. ರಸ್ತೆಗಳಿಗೆ ಹಾಕಿದ ಡಾಂಬಾರು ಚಪಾತಿಯಂತೆ ಕಿತ್ತುಬರುತ್ತಿರುವುದನ್ನು ಅಲ್ಲಲ್ಲಿ ನೋಡುತ್ತಿದ್ದೇವೆ. ರಾಜ್ಯದ ಜನರು ಭ್ರಷ್ಟ ಆಡಳಿತಕ್ಕೆ ಅಂತ್ಯ ಹಾಡುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗೆ ಎಎಪಿಯ ಮೂರು ಬೇಡಿಕೆಗಳು: 1. ಕಳಪೆ ಕಾಮಗಾರಿ ನಡೆಸಿ ರಸ್ತೆಗುಂಡಿಗಳಿಗೆ ಕಾರಣರಾದ ಹಾಗೂ ಅವುಗಳನ್ನು ಮುಚ್ಚಲು ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್ ಬೇಜವಾಬ್ದಾರಿ ಹಾಗೂ ಕೊಲೆ ಸಂಚಿನ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಬೇಕು.
2. ರಸ್ತೆಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಈ ಕೂಡಲೇ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಬೇಕು ಹಾಗೂ ಅವರ ಕುಟುಂಬದ ಒಬ್ಬರು ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು.
3. ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಮುನ್ನ ಮುಖ್ಯಮಂತ್ರಿಯವರು ಕೆಲವು ರಸ್ತೆಗಳ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಿಸಿದ್ದು, ರಸ್ತೆಗುಂಡಿಗಳನ್ನು ಮುಚ್ಚಿಸುವ ಸಾಮರ್ಥ್ಯ ತಮಗಿದೆ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ. ಅದೇ ರೀತಿ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಎಲ್ಲ ರಸ್ತೆಗಳನ್ನು ಒಂದು ವಾರದೊಳಗೆ ಮುಚ್ಚಿಸಬೇಕು. ಈ ಕುರಿತು ಬೆಂಗಳೂರಿನ ಜನತೆಗೆ ಈ ಕೂಡಲೇ ಬಹಿರಂಗ ವಾಗ್ದಾನ ನೀಡಬೇಕು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್ ಕಾಳಪ್ಪ, ಬಿ.ಟಿ.ನಾಗಣ್ಣ, ಜಗದೀಶ್ ವಿ ಸದಂ, ಕುಶಲಸ್ವಾಮಿ, ಉಷಾ ಮೋಹನ್, ಸಂಚಿತ್ ಸವ್ಹಾನಿ, ದರ್ಶನ್ ಜೈನ್, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ರಾಜಶೇಖರ್ ದೊಡ್ಡಣ್ಣ, ಚನ್ನಪ್ಪಗೌಡ ನೆಲ್ಲೂರು, ಪ್ರಕಾಶ್ ನೆಡುಂಗಡಿ, ರವಿಚಂದ್ರ ನೆರಬೆಂಚಿ, ಅಶೋಕ್ ಮೃತ್ಯುಂಜಯ, ಫಾರಿದಾ, ವಿಜಯ್ ಶಾಸ್ತ್ರಿಮಠ್, ಅಮೃತಾ ಮತ್ತಿತರ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು, ಜನಸಾಮಾನ್ಯರು ಭಾಗವಹಿಸಿದ್ದರು.