ಮೈಸೂರು: ತಮ್ಮ ಜಮೀನನ ಫಸಲನ್ನು ನಾಶ ಮಾಡಲು ಕಾಡಾನೆ ಬಂದಿದೆ ಎಂದು ದಸರಾ ಆನೆ ಬಲರಾಮನಿಗೆ ಗುಂಡು ಹೊಡೆದಿದ್ದ ಜಮೀನೊಂದರ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದಲ್ಲಿದ್ದ ಜಮೀನಿಗೆ ಬಲರಾಮ ಆನೆ ಹೋಗಿತ್ತು. ಈ ವೇಳೆ ಜಮೀನಿನ ಮಾಲೀಕ ಸುರೇಶ್ ಎಂಬಾತ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಆನೆಗೆ ಗುಂಡು ಹಾರಿಸಿದ್ದ.
ಪರಿಣಾಮ ಬಲರಾಮ ಆನೆ ತೊಡೆ ಭಾಗಕ್ಕೆ ಗುಂಡು ಹೊಕ್ಕಿ ಗಾಯಗೊಂಡು ಜಮೀನನಲ್ಲೇ ನರಳುತ್ತಿತ್ತು. ಈ ನಡುವೆ ಇತ್ತ ಸಂಜೆಯಾದರೂ ಬಲರಾಮ ಬರಲಿಲ್ಲವಲ್ಲ ಎಂದು ಮಾವುತರು ಹುಡುಕಿಕೊಂಡು ಹೋದಾಗ ಜಮೀನಿನಲ್ಲಿ ನರಳುತ್ತ ಬಿದ್ದಿರುವುದನ್ನು ಕಂಡು ಕೂಡಲೇ ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಬಳಿಕ ಸಾಕಾನೆ ಶಿಬಿರಕ್ಕೆ ಬಲರಾಮನನ್ನು ಕರೆತಂದು ಚಿಕಿತ್ಸೆ ನೀಡಿದ್ದಾರೆ. ಗುಂಡು ತೀರ ಒಳಗೆ ಹೋಗಿಲ್ಲದಿರುವುದರಿಂದ ಬಲರಾಮನ ಪ್ರಾಣಕ್ಕೆ ಏನು ತೊಂದರೆ ಇಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಆನೆಗೆ ಚಿಕಿತ್ಸೆ ಮುಂದುವರಿಸಿದ್ದು, ಬಲರಾಮ ಚೇತರಿಸಿಕೊಳ್ಳುತ್ತಿದ್ದಾನೆ.
ಇತ್ತ ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬಂದೂಕು, ಕಾರ್ಟ್ರಿಜ್ನ್ನು ವಶಪಡಿಸಿಕೊಳ್ಳಲಾಗಿದೆ. ಜಮೀನು ಮಾಲೀಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಒಕ್ಕಣ್ಣನಾದ ಬಲರಾಮ ಆನೆ ಮೈಸೂರು ದಸರಾ ಮಹೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ತನ್ನ ಗಾಂಭೀರ್ಯದ ನಡೆಯಿಂದ ಜಂಬೂಸವಾರಿ ವೇಳೆ ಇಡೀ ನೋಡುಗರ ಮನಗೆದಿದ್ದಾನೆ. ಹೀಗೆ 14 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರವಣಿಗೆಯಲ್ಲಿ ಸಾಗಿದ್ದು ಈಗ ವಯಸ್ಸಾಗಿರುವುದರಿಂದ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾನೆ.