ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಳಿಗೆಗಳ ಬಾಕಿ ಉಳಿಸಿಕೊಂಡಿರುವ ಬಾಡಿಕೆ ಹಣ ಕೇಳಿದಕ್ಕೆ ಸಾರಿಗೆ ಅಧಿಕಾರಿಗಳು ಹಣ ಕೇಳಿದ್ದ ಮಹಾ ಅಪರಾಧವೆಂಬಂತೆ ಮಹಿಳೆಯೊಬ್ಬರು ಮಚ್ಚು ಹಿಡಿದು ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಹೀಗೆ ಮಚ್ಚು ತೋರಿಸಿ ಬೆದರಿಸಿದ ಮಹಿಳೆ ಹಾಗೂ ಆಕೆ ಪತಿ ಇಬ್ಬರು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.
ಹೌದು! ಮೈಸೂರಿನ ಕಾಂಗ್ರೆಸ್ ಮುಖಂಡ ಶಫಿ ಮತ್ತು ಅವರ ಪತ್ನಿ ಸಯ್ಯದ್ ಮೈಬುನಿಸಾ ಅವರನ್ನು ಮೈಸೂರಿನ ಪೊಲೀಸರು ಕೊಡಗಿನ ವಿರಾಜಪೇಟೆಯಲ್ಲಿ ಬಂಧಿಸಿದ್ದಾರೆ. ಅದಷ್ಟೇ ಅಲ್ಲ ಅಧಿಕಾರಿಗಳಿಗೆ ಮಚ್ಚು ತೋರಿಸಿ ರೌಡಿಗಳಂತೆ ವರ್ತಿಸಿದ್ದರಿಂದ ಆರೋಪಿಗಳ ವಿರುದ್ಧ ರೌಡಿ ಶೀಟರ್ ಕೇಸ್ ದಾಖಲಿಸಿದ್ದಾರೆ.
ಘಟನೆ ವಿವರ: ಮೈಸೂರಿನ ಸಾತಗಳ್ಳಿಯ ಕೆಎಸ್‌ಆರ್‌ಟಿಸಿ ಬಸ್ ಘಟಕದ ಬಳಿ ಸಾರಿಗೆ ಅಧಿಕಾರಿಗಳ ಬಾಡಿಗೆ ಕೆಳಿದಕ್ಕೆ ಅವರ ವಿರುದ್ಧ ಮಹಿಳೆ ಕೂಗಾಡಿದ್ದರು. ಈ ವೇಳೆ ಅಧಿಕಾರಿಗಳು ಬಾಕಿ ಇದ್ದ ಬಾಡಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಕ್ಕೆ ಅವರ ವಿರುದ್ಧ ಕೂಗಾಡಿದ್ದಲ್ಲದೇ ಮಚ್ಚು ತೋರಿಸಿ ಬೆದರಿಕೆ ಕೂಡ ಹಾಕಿದ್ದರು.
ಕಾಂಗ್ರೆಸ್ ಮುಖಂಡ ಶಫೀ ಅಹಮದ್ ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಸ್ಥಳವನ್ನು 12 ವರ್ಷಗಳ ಅವಧಿಗೆ ಪರವಾನಗಿ ನೀಡಿ ಕರಾರು ಒಪ್ಪಂದ ಮಾಡಿಕೊಂಡಿದ್ದ. ಬಾಡಿಗೆ ಪಡೆದ ಮಳಿಗೆಗಳನ್ನು 6 ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದು, ಅವರಿಂದ ಪ್ರತಿ ತಿಂಗಳು ತಪ್ಪದೆ ಬಾಡಿಗೆ ಪಡೆದಿದ್ದಾನೆ.
ಆದರೆ ಶಫಿ ಮಾತ್ರ ಬಾಡಿಗೆಯನ್ನು ಸಾರಿಗೆ ಇಲಾಖೆಗೆ ಸರಿಯಾಗಿ ಪಾವತಿ ಮಾಡಿಲ್ಲ. ಒಂದಲ್ಲ ಎರೆಡಲ್ಲ ಬರೋಬ್ಬರಿ 1 ಕೋಟಿ 80 ಲಕ್ಷ ರೂ. ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾನೆ. ಈ ಸಂಬಂಧ ಹಲವು ಬಾರಿ ಅಧಿಕಾರಿಗಳು ಹೇಳಿದರೂ ಸ್ಪಂದಿಸಿಲ್ಲ.
ಇದರಿಂದ ಬೇಸತ್ತ ಅಧಿಕಾರಿಗಳು ಕಡೆಗೆ ಕೋರ್ಟ್ ಮೊರೆ ಹೋಗಿ ಕಾನೂನಾತ್ಮಕವಾಗಿ ಕೋರ್ಟ್ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನೋಟಿಸ್ ನೀಡಿದ್ದಕ್ಕೆ ಪತಿ ಹಾಗೂ ಪತ್ನಿ ಇಬ್ಬರೂ ಬಸ್ ಡಿಪೋ ಬಳಿ ಅಧಿಕಾರಿಗಳ ಜತೆ ಗಲಾಟೆ ಮಾಡಿದ್ದರು.
ಮಚ್ಚನ್ನ ತೋರಿಸಿ ಅವಾಚ್ಯ ಶಬ್ಧಗಳಿಂದ ಅಧಿಕಾರಿಗಳನ್ನು ನಿಂದಿಸಿದ್ದರು. ಅಧಿಕಾರಿಗಳು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ಇಬ್ಬರ ವಿರುದ್ಧ ಪ್ರಕರಣ ದಾಖಲಾಗುತ್ತಿದಂತೆ ದಂಪತಿ ಪರಾರಿಯಾಗಿದ್ದರು. ಅವರಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ ಪೊಲೀಸರಿಗೆ ಘಟನೆ ನಡೆದ ಐದು ದಿನದ ಬಳಿಕ ಕೊಡಗಿನ ವಿರಾಜಪೇಟೆಯಲ್ಲಿ ಸಿಕ್ಕಿದ್ದಾರೆ.
ಸದ್ಯ ಇಬ್ಬರನ್ನು ಬಂಧಿಸಿದ ಮೈಸೂರು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಈಗ ಜೈಲಿಗಟ್ಟಿದ್ದಾರೆ.