ಬೆಳಗಾವಿ: ಸುವರ್ಣ ಸೌಧದ ಮುಂಭಾಗ ಕಳೆದ 8 ದಿನಗಳಿಂದ ಸಾರಿಗೆ ಸಮಾನ ಮನಸ್ಕರ ವೇದಿಕೆಯಿಂದ ಸಾರಿಗೆ ನೌಕರರು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಸಾರಿಗೆ ಸಚಿವರು ಕೊಟ್ಟ ಭರವಸೆಯ ಹಿನ್ನೆಲೆಯಲ್ಲಿ ಇಂದು ಅಂತ್ಯಕಂಡಿದೆ.
ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಚಂದ್ರಶೇಖರ್ ಅವರನ್ನು ಇಂದು ಸಂಜೆ ಸುವರ್ಣಸೌಧಕ್ಕೆ ಕರೆಸಿಕೊಂಡ ಸಾರಿಗೆ ಸಚಿವ ಶ್ರೀರಾಮುಲು ಅವರು, ಯಾವುದೇ ಷರತ್ತುಗಳಿಲ್ಲದೆ ವಜಾಗೊಳಿಸಿರುವ ನೌಕರರನ್ನು ತೆಗೆದುಕೊಳ್ಳುವ ಮತ್ತು ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವ ಸಂಬಂಧ ಭರವಸೆ ನೀಡಿದ್ದರಿಂದ ಇಂದು ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿರುವುದಾಗಿ ಚಂದ್ರಶೇಖರ್ ತಿಳಿಸಿದ್ದಾರೆ.
ಇಂದು ರಾತ್ರಿ 8.40ರ ಸುಮಾರಿಬಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಚಂದ್ರಶೇಖರ್, ಸಚಿವರು ವಜಗೊಂಡಿರುವ ನೌಕರರನ್ನು ವಾಪಸ್ ತೆಗೆದುಕೊಳ್ಳುವ ಜತೆಗೆ ವೇತನ ಆಯೋಗದ ಬಗ್ಗೆ ಸಚಿವರಿಗೆ ಇದ್ದ ಗೊಂದಲಗಳ ಬಗ್ಗೆ ವಿವರಣೆ ನೀಡಿದ್ದರಿಂದ ಅವರು ಈ ಬಗ್ಗೆ ಹಣಕಾಸು ಜವಾಬ್ದಾರಿಯನ್ನು ಹೊಂದಿರುವ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗುತ್ತಿದ ಎಂದು ತಿಳಿದಿದರು.
ಸಾರಿಗೆ ಸಚಿವರು ಬರಿ ಭರವಸೆಕೊಡುತ್ತಲೇ ಈಗ ಮೂರು ವರ್ಷಕಳೆದಿದ್ದಾರೆ. ಅವರ ಭರವಸೆಯನ್ನೇ ನಂಬಿಕೊಂಡು ನೌಕರರು ಕೂಡ ಇನ್ನೂ ಕಾಲ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೌಕರರು ಇಟ್ಟಿರುವ ಬೇಡಿಕೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಈಡೇರಿಸುತ್ತದೆ ಎಂಬ ಭರವಸೆಯನ್ನು ಕೆಲ ನೌಕರರು ಕಳೆದುಕೊಂಡಿದ್ದು, ಕಾನೂನಾತ್ಮಕವಾಗಿ ಹೋರಾಟ ಒಂದೇ ದಾರಿ ಎಂದು ಹೇಳುತ್ತಿದ್ದಾರೆ.