ಬೆಳಗಾವಿ: ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳು ನಮ್ಮ ರಾಜ್ಯದಲ್ಲಿ ನನ್ನ ಕ್ಷೇತ್ರದಲ್ಲೂ ಇದ್ದಾರೆ. ಹಾಗಂದ ಮಾತ್ರಕ್ಕೆ ಅವರೆಲ್ಲರೂ ಶಾಸಕರಾಗೋಕೆ ಸಾಧ್ಯವಾಗಿದ್ಯಾ, ಹಣ ಇದೆ ಎಂದ ಕೂಡಲೇ ಶಾಸಕನಾಗಲಾಗುತ್ತದೆಯೇ? ಆದರೆ ನಾನೊಬ್ಬ ಸಾಮಾನ್ಯನಾಗಿ ಶಾಸಕನಾಗಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ದೆಹಲಿಯಿಂದ ಬಂದು ಏನಾದರೂ ಸಿಹಿ ಸುದ್ದಿ ನೀಡ್ತಾರಾ ಎಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿತ ಪ್ರಶ್ನೆಗೆ ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಉತ್ತರಿಸಿ, ನನಗೆ ವರ್ಷದ 365 ದಿನವೂ ಸಿಹಿ ಸುದ್ದಿನೇ, ಕಹಿ ಅನ್ನೋದೇ ಗೊತ್ತಿಲ್ಲ ಎಂದು ಹೇಳಿದರು.
ಇನ್ನು ಈಗಾಗಲೇ 2009 ರಿಂದ 2012ರ ವರೆಗೆ ಸಚಿವನಾಗಿ ಕೆಲಸ ಮಾಡಿದ ಅನುಭವ ನನಗಿದೆ. ನಾನಿಲ್ಲಿ ಸಂತೋಷದಿಂದಲೇ ಇದ್ದೇನೆ. ನಾನು ಯಾವತ್ತೂ ಸಂತೋಷ ಜೀವಿ. ಆದ್ರೆ ನನ್ನಂತಹ ಒಬ್ಬ ಸಾಮಾನ್ಯ ಮನುಷ್ಯನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಅದಕ್ಕಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ, ಜನಾದೇಶ ಬಹಳ ಮುಖ್ಯ ಎಂದರು.
ಎಲ್ಲ ಸಾಮರ್ಥ್ಯ, ಅರ್ಹತೆ, ಅನುಭವ ನನಗಿದೆ ಆದರೆ, ರೇಣುಕಾಚಾರ್ಯ ಬೇಡ ಅಂತಾ ಇರಬಹುದೇನೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಸಿಎಂಗೆ ತಿವಿದ ಅವರು, ಸಚಿವ ಸ್ಥಾನಕ್ಕೆ ಅವಕಾಶಗಳು ವಂಚಿತರಾಗಿದ್ದೇವೆ ಎಂದು ಸುಮ್ಮನಾಗಿರ್ತೀವಿ ಅಷ್ಟೇ ಎಂದು ಹೇಳಿದರು.
ನನಗೆ ಸರ್ಕಾರ ಮತ್ತು ಸಂಘಟನೆ ಎಲ್ಲ ರೀತಿಯ ಸ್ಥಾನಮಾನ ಗೌರವ ಕೊಟ್ಟಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ಸಾಮರ್ಥ್ಯ ನೋಡಿಯೇ ನನ್ನ ಹೋರಾಟದ ಫಲದಿಂದ ನಾನು ಶಾಸಕನಾಗಿದ್ದೇನೆ ಇನ್ನು ಜನಾದೇಶ ಮತ್ತೊಮ್ಮೆ ಸಿಗುವ ಆತ್ಮವಿಶ್ವಾಸವಿದೆ ಎಂದು ತಿಳಿಸಿದರು.