ಚಾಲಕನ ನಿಯಂತ್ರಣ ಕಳೆದುಕೊಂಡ ಬೊಲೆರೋ – ಭೀಕರ ಅಪಘಾತ : ಆರು ಮಂದಿ ಸಾವು – ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಅಪಘಾತಗೊಂಡು 6 ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಳಿ ತಿರುವಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಗುರುವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹುಲಕುಂದ ಗ್ರಾಮದ ಹನುಮವ್ವ (25), ದೀಪಾ(31), ಸವಿತಾ (17), ಸುಪ್ರಿತಾ (11), ಮಾರುತಿ (42), ಇಂದಿರವ್ವ (24) ಎಂಬುವರು ಮೃತಪಟ್ಟಿದ್ದಾರೆ.
ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬೊಲೆರೋ ರಸ್ತೆ ಪಕ್ಕದ ಆಲದ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಈ ಅವಘಟ ಜರುಗಿದೆ. ಮೃತರೆಲ್ಲರೂ ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಪಘಾತಕ್ಕೀಡಾದ ಬೊಲೆರೋದಲ್ಲಿ 23 ಜನ ಪ್ರಯಾಣಿಸುತ್ತಿದ್ದರು.
ಅವರಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಅಸುನೀಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾದಯಾತ್ರೆ ಹೊರಟವರು ಯಮನ ಪಾದ ಸೇರಿದರು: ಮೃತರು ಯಾತ್ರಾರ್ಥಿಗಳಾಗಿ ನಡೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಪಾದಯಾತ್ರೆ ಹೊರಟವರನ್ನು ನಿಲ್ಲಿಸಿದ ಬೊಲೆರೋ ಚಾಲಕ ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡಿದ್ದಾನೆ. ಯಾತ್ರಾರ್ಥಿಗಳು ವಾಹನ ಹತ್ತಿದ ಕೆಲವೇ ನಿಮಿಷಗಳಲ್ಲಿ ಅಪಘಾತವಾಗಿ ಆರು ಜನರು ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ.
ರಾಜ್ಯ ಸರ್ಕಾರ ಪರಿಹಾರ: ಮೃತಪಟ್ಟ ಯಾತ್ರಿಕರಿಗೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತಪಟ್ಟವರಿ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ತಕ್ಷಣವೇ ಪರಿಹಾರ ಒದಗಿಸುವ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
[wp-rss-aggregator limit=”3″]